ADVERTISEMENT

ಕೇಜ್ರಿವಾಲ್ ಹತ್ಯೆಗೆ ದೊಡ್ಡ ಸಂಚು: ಎಎಪಿ ಆರೋಪ

ಪಿಟಿಐ
Published 26 ಅಕ್ಟೋಬರ್ 2024, 11:06 IST
Last Updated 26 ಅಕ್ಟೋಬರ್ 2024, 11:06 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರ ಕೊಲೆಗೆ ‘ದೊಡ್ಡ ಸಂಚು’ ರೂಪಿಸಲಾಗಿದೆ ಎಂದು ಆರೋಪಿಸಿರುವ ಎಎಪಿ, ‘ಅವರಿಗೆ ಏನಾದರೂ ಸಂಭವಿಸಿದರೆ ಅದಕ್ಕೆ ಬಿಜೆಪಿಯೇ ಹೊಣೆ’ ಎಂದಿದೆ.

ನವದೆಹಲಿಯ ವಿಕಾಸಪುರಿಯಲ್ಲಿ ಶುಕ್ರವಾರ ಪಾದಯಾತ್ರೆ ವೇಳೆ ಬಿಜೆಪಿ ಗೂಂಡಾಗಳು ಕೇಜ್ರಿವಾಲ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಎಪಿ ನಾಯಕರು ಆರೋಪಿಸಿದ್ದರು.

ADVERTISEMENT

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್, ‘ಘಟನೆಯಲ್ಲಿ ಪೊಲೀಸರು ಭಾಗಿಯಾಗಿರುವುದು ಕೇಜ್ರಿವಾಲ್ ಅವರ ಹತ್ಯೆಗೆ ಪಿತೂರಿ ನಡೆದಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅವರ ಜೀವಕ್ಕೆ ಬಿಜೆಪಿಯಿಂದ ಅಪಾಯವಿದೆ’ ಎಂದು ಟೀಕಿಸಿದ್ದಾರೆ.

ವಿಕಾಸಪುರಿ ಘಟನೆಯ ಹೊರತಾಗಿಯೂ ಕೇಜ್ರಿವಾಲ್‌ ಅವರು ತಮ್ಮ ಪಾದಯಾತ್ರೆ ಮುಂದುವರಿಸಲಿದ್ದಾರೆ ಎಂದು ಅವರು ಹೇಳಿದರು.

ಹಲ್ಲೆ ಘಟನೆ ಬಗ್ಗೆ ಏಕೆ ದೂರು ನೀಡಿಲ್ಲ ಎಂಬ ಪ್ರಶ್ನೆಗೆ, ಪೊಲೀಸರು ನಿಷ್ಪಕ್ಷಪಾತವಾಗಿ ತಮ್ಮ ಕೆಲಸ ನಿರ್ವಹಿಸಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ. ಬಿಜೆಪಿ ಯುವ ಮೋರ್ಚಾಗೆ ಸೇರಿದ ದಾಳಿಕೋರರನ್ನು ತಡೆಯಲು ಅಧಿಕಾರಿಗಳು ಮುಂದಾಗಲಿಲ್ಲ’ ಎಂದು ದೂರಿದರು.

‘ಬಿಜೆಪಿ ನಾಯಕರು ಕೇಜ್ರಿವಾಲ್‌ ಮೇಲೆ ಹಲ್ಲೆ ನಡೆಸಿದವರ ಬೆಂಬಲಕ್ಕೆ ನಿಂತಿದ್ದಾರೆ. ಪೊಲೀಸರು ಘಟನೆ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಬೇಕು. ಎಎಪಿಯು ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲಿದೆ’ ಎಂದರು.

ಎಎಪಿ ಆರೋಪವನ್ನು ಬಿಜೆಪಿ ನಾಯಕರು ತಳ್ಳಿಹಾಕಿದ್ದು, ‘ಮನೆಗಳಿಗೆ ಕಲುಷಿತ ನೀರು ಪೂರೈಕೆಯಾಗಿರುವುದಕ್ಕೆ ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ’ ಎಂದಿದ್ದಾರೆ.

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಹಲ್ಲೆ: ಶನಿವಾರ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ ದೆಹಲಿ ಸಚಿವ ಸೌರಭ್‌ ಭಾರದ್ವಾಜ್, ‘ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕೇಜ್ರಿವಾಲ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಜೆಪಿ ಯುವ ಮೋರ್ಚಾ ದೆಹಲಿ ಘಟಕದ ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯೂ ದಾಳಿಕೋರರಲ್ಲಿ ಸೇರಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.