ನವದೆಹಲಿ: ಆಮ್ ಆದ್ಮಿ ಪಕ್ಷ (AAP) ಮಂಗಳವಾರ ದೆಹಲಿಯ 4 ಹಾಗೂ ಹರಿಯಾಣದ ಒಂದು ಸೇರಿ 5 ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಹಿರಿಯ ನಾಯಕ ಸೋಮನಾಥ್ ಭಾರ್ತಿ ಅವರನ್ನು ನವದೆಹಲಿ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯ ನಂತರ ಪಕ್ಷ ಐವರ ಹೆಸರುಗಳನ್ನು ಘೋಷಿಸಿದೆ.
ದೆಹಲಿ ಜಲ ಮಂಡಳಿ ಉಪಾಧ್ಯಕ್ಷರೂ ಆಗಿರುವ ಸೋಮನಾಥ್ ಭಾರ್ತಿ ಅವರನ್ನು ನವದೆಹಲಿ ಕ್ಷೇತ್ರದಿಂದ, ಕೊಂಡ್ಲಿ ಶಾಸಕ ಕುಲದೀಪ್ ಕುಮಾರ್ ಪೂರ್ವ ದೆಹಲಿಯಿಂದ, ಸಾಹಿರಾಮ್ ಪೆಹೆಲ್ವಾನ್ ದಕ್ಷಿಣ ದೆಹಲಿಯಿಂದ ಮತ್ತು ಮಾಜಿ ಸಂಸದ ಮಹಾಬಲ ಮಿಶ್ರಾ ಅವರನ್ನು ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ರಾಜ್ಯಸಭಾ ಮಾಜಿ ಸಂಸದ ಸುಶೀಲ್ ಗುಪ್ತಾ ಅವರನ್ನು ಹರಿಯಾಣದ ಕುರುಕ್ಷೇತ್ರದಿಂದ ಪಕ್ಷ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಕಾಂಗ್ರೆಸ್–ಎಎಪಿ ನಡುವೆ ಸೀಟು ಹಂಚಿಕೆ:
ಲೋಕಸಭೆ ಚುನಾವಣೆಗೆ ಎಎಪಿ ಇಂಡಿಯಾ ಮೈತ್ರಿಕೂಟದ ಪಾಲುದಾರರಾಗಿರುವ ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಉಭಯ ಪಕ್ಷದ ನಾಯಕರು ಇತ್ತೀಚೆಗೆ ಸೀಟು ಹಂಚಿಕೆಯನ್ನು ಘೋಷಣೆ ಮಾಡಿದ್ದರು. ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ ಆಮ್ ಆದ್ಮಿ ಪಕ್ಷ 4 ಹಾಗೂ ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.