ADVERTISEMENT

ಕೋಚಿಂಗ್‌ ಸೆಂಟರ್‌ ನಿಯಂತ್ರಣಕ್ಕೆ ಕಾನೂನು: ದೆಹಲಿ ಕ್ಯಾಬಿನೆಟ್‌ ಸಚಿವೆ ಆತಿಶಿ ‌

ಪಿಟಿಐ
Published 31 ಜುಲೈ 2024, 16:04 IST
Last Updated 31 ಜುಲೈ 2024, 16:04 IST
<div class="paragraphs"><p>ಸಚಿವೆ ಆತಿಶಿ </p></div>

ಸಚಿವೆ ಆತಿಶಿ

   

– ಪಿಟಿಐ ಚಿತ್ರ

ನವದೆಹಲಿ: ಕೋಚಿಂಗ್‌ ಸೆಂಟರ್‌ಗಳ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಕಾನೂನು ಜಾರಿಗೆ ತರಲಿದೆ ಎಂದು ಸಚಿವೆ ಆತಿಶಿ ಬುಧವಾರ ಹೇಳಿದರು.

ADVERTISEMENT

‌‘ಕಾನೂನು ರೂಪಿಸಲು ಸರ್ಕಾರವು ಅಧಿಕಾರಿಗಳು ಮತ್ತು ವಿವಿಧ ಕೋಚಿಂಗ್ ಹಬ್‌ಗಳ ವಿದ್ಯಾರ್ಥಿಗಳನ್ನು ಒಳಗೊಂಡ ಸಮಿತಿ ರಚಿಸಲಿದೆ. ಮೂಲಸೌಕರ್ಯ, ಅಧ್ಯಾಪಕರ ಅರ್ಹತೆ, ಶುಲ್ಕ ನಿಯಂತ್ರಣ ಮತ್ತು ದಿಕ್ಕುತಪ್ಪಿಸುವ ಜಾಹೀರಾತುಗಳ ತಡೆಗಟ್ಟುವ ನಿಬಂಧನೆಗಳನ್ನು ಹೊಸ ಕಾನೂನು ಒಳಗೊಂಡಿರಲಿದೆ. ಇದಕ್ಕೂ ಮೊದಲು ಸಾರ್ವಜನಿಕರ ಪ್ರತಿಕ್ರಿಯೆ ಕೂಡ ಪಡೆಯಲಾಗುವುದು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾನೂನುಗಳನ್ನು ಉಲ್ಲಂಘಿಸಿ ನೆಲಮಾಳಿಗೆಯನ್ನು ಬಳಸುವ ಕೋಚಿಂಗ್ ಸೆಂಟರ್‌ಗಳ ಮೇಲೆ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಕಠಿಣ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

ಹಳೆ ರಾಜಿಂದರ್ ನಗರದ ರಾವ್ಸ್‌ ಐಎಎಸ್‌ ಸ್ಟಡಿ ಸರ್ಕಲ್‌ ಕೇಂದ್ರದಲ್ಲಿ ಮೂವರು ಐಎಎಸ್‌ ಆಕಾಂಕ್ಷಿಗಳು ಮೃತಪಟ್ಟ ಪ್ರಕರಣದ ಮ್ಯಾಜಿಸ್ಟ್ರೇಟ್ ತನಿಖಾ ವರದಿ ಇನ್ನು ಆರು ದಿನಗಳಲ್ಲಿ ಸಲ್ಲಿಕೆಯಾಗಲಿದೆ. ಅಕ್ರಮ ಕಟ್ಟಡ ಬಳಕೆಯೇ ದುರಂತಕ್ಕೆ ಕಾರಣವಾಗಿದೆ. ಇದರಲ್ಲಿ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

‘ರಾಜಿಂದರ್ ನಗರ, ಮುಖರ್ಜಿ ನಗರ, ಲಕ್ಷ್ಮಿ ನಗರ ಮತ್ತು ಪ್ರೀತ್ ವಿಹಾರ್‌ನಲ್ಲಿರುವ 30 ಕೋಚಿಂಗ್ ಸೆಂಟರ್‌ಗಳ ನೆಲಮಾಳಿಗೆಗಳಿಗೆ ಬೀಗಮುದ್ರೆ ಹಾಕಲಾಗಿದೆ. ಅಲ್ಲದೆ, ಇತರ 200 ಕೋಚಿಂಗ್ ಸೆಂಟರ್‌ಗಳಿಗೆ ನೋಟಿಸ್ ನೀಡಲಾಗಿದೆ’ ಎಂದು ತಿಳಿಸಿದರು.

ಈ ನಡುವೆ, ದುರಂತಕ್ಕೆ ಕಾರಣವಾದ ಕೋಚಿಂಗ್ ಸೆಂಟರ್ ಮಾಲೀಕನ ಮಾವ ವಿ.ಪಿ. ಗುಪ್ತಾ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ, ಮಹಾನಗರಪಾಲಿಕೆಯ ನಾಲ್ವರು ಅಧಿಕಾರಿಗಳಿಗೆ ತನಿಖೆಗೆ ಹಾಜರಾಗಲು ಪೊಲೀಸರು ನೋಟಿಸ್‌ ನೀಡಿದ್ದಾರೆ.

ಎಂಸಿಡಿ ಆಯುಕ್ತರನ್ನು ಭೇಟಿ ಮಾಡಿದ ನಿಯೋಗ:

ಮೂವರು ಅಭ್ಯರ್ಥಿಗಳ ಸಾವಿನ ನಂತರ ಭುಗಿಲೆದ್ದ ಪ್ರತಿಭಟನೆಗಳ ನಡುವೆ ಯುಪಿಎಸ್‌ಸಿ ಪರೀಕ್ಷಾ ಆಕಾಂಕ್ಷಿಗಳ ನಿಯೋಗವು ಬುಧವಾರ ಎಂಸಿಡಿ ಆಯುಕ್ತ ಅಶ್ವನಿ ಕುಮಾರ್ ಅವರನ್ನು ಭೇಟಿ ಮಾಡಿತು.

ವಿದ್ಯಾರ್ಥಿಗಳು ತಮ್ಮ ಜೀವಕ್ಕೆ ಅಪಾಯಕಾರಿಯಾಗಿರುವ ಹಲವು ಕೋಚಿಂಗ್ ಸೆಂಟರ್‌ಗಳಲ್ಲಿನ ಕಳಪೆ ಸುರಕ್ಷತಾ ಕ್ರಮಗಳ ಬಗ್ಗೆ ಆಯುಕ್ತರ ಜತೆ ಚರ್ಚಿಸಿದರು ಎಂದು ಅಧಿಕಾರಿಗಳು ತಿಳಿಸಿದರು.

ನಾಲ್ಕನೇ ದಿನಕ್ಕೆ ಪ್ರತಿಭಟನೆ

ಏತನ್ಮಧ್ಯೆ, ಘಟನೆ ಖಂಡಿಸಿ, ಕೇಂದ್ರ ದೆಹಲಿಯ ಹಳೆ ರಾಜಿಂದರ್ ನಗರದಲ್ಲಿ ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಬುಧವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿತು. 

ಕೆಲವು ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಂಸಿಡಿ ವಿರುದ್ಧ ಮಂಗಳವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. 

ಪ್ರತಿಭಟನೆಯ ಮುಂದಿನ ನಡೆ ನಿರ್ಧರಿಸಲು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು 15 ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದರು. 

‘ಚರಂಡಿ ಹೂಳು ತೆಗೆಯದೇ ಗುತ್ತಿಗೆದಾರರಿಗೆ ಹಣ ಪಾವತಿಸುವಂತಿಲ್ಲ’:

ಚರಂಡಿಗಳ ಹೂಳು ತೆಗೆಯುತ್ತಿರುವ ಗುತ್ತಿಗೆದಾರರಿಗೆ ಅವರು ಕೆಲಸ ಪೂರ್ಣಗೊಳಿಸಿರುವ ಬಗ್ಗೆ ಮೂರನೇ ವ್ಯಕ್ತಿಯಿಂದ ಪರಿಶೀಲನೆ ಆಗದ ಹೊರತು ಹಣ ಪಾವತಿಸುವಂತಿಲ್ಲ ಎಂದು ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್‌ ಕುಮಾರ್‌ ನಿರ್ದೇಶನ ನೀಡಿದ್ದಾರೆ.

ಹಳೆ ರಾಜಿಂದರ್ ನಗರದ ಘಟನೆಯ ನಂತರ ಈ ನಿರ್ದೇಶನ ನೀಡಲಾಗಿದೆ. ದೆಹಲಿ ನಗರಾಭಿವೃದ್ಧಿ ಸಚಿವ ಸೌರಭ್ ಭಾರದ್ವಾಜ್ ಅವರು ಗುತ್ತಿಗೆದಾರರಿಂದ ಚರಂಡಿಗಳ ಹೂಳು ತೆಗೆಸಿದ ಕಾಮಗಾರಿಯನ್ನು ಮೂರನೇ ವ್ಯಕ್ತಿಯ ಪರಿಶೀಲನೆ ನಡೆಸಿರುವ ಬಗ್ಗೆ ಮಾಹಿತಿ ಕೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.