ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ ಜಾರಿ ನಿರ್ದೇಶನಾಲಯದ ಕ್ರಮದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವಂತೆ ಆಮ್ ಆದ್ಮಿ ಪಕ್ಷದ ದೆಹಲಿ ಶಾಖೆಯ ಸಂಚಾಲಕ ಹಾಗೂ ದೆಹಲಿ ಸಚಿವ ಗೋಪಾಲ್ ರೈ ಕರೆ ನೀಡಿದ್ದಾರೆ.
ಕೇಜ್ರಿವಾಲ್ ಅವರ ಬಂಧನವು ‘ಪ್ರಜಾಪ್ರಭುತ್ವದ ಕೊಲೆ’, ‘ಸರ್ವಾಧಿಕಾರದ ಘೋಷಣೆ’ ಎಂದು ಅವರು ಟೀಕಿಸಿದ್ದಾರೆ.
‘ದೇಶದಾದ್ಯಂತ ಇರುವ ಬಿಜೆಪಿ ಕಚೇರಿ ಮುಂದೆ ಪ್ರತಿಭಟಿಸಬೇಕು ಎಂದು ನಾನು ದೇಶದ ಜನರಿಗೆ ಕರೆ ನೀಡುತ್ತಿದ್ದೇನೆ. ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಾವು ಎಎಪಿ ಕಚೇರಿಯಲ್ಲಿ ಸಮಾವೇಶಗೊಳ್ಳಲಿದ್ದೇವೆ. ಬಳಿಕ ಬಿಜೆಪಿ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ರೈ ಹೇಳಿದ್ದಾರೆ.
‘ಕೇಜ್ರಿವಾಲ್ ಅವರನ್ನು ಬಂಧಿಸುವುದಾದರೆ, ಯಾರನ್ನೂ ಬೇಕಾದರೂ ಬಂಧಿಸಬಹುದು. ಯಾರ ಧ್ವನಿಯನ್ನೂ ಬೇಕಾದರೂ ಅಡಗಿಸಬಹುದು. ಅರವಿಂದ ಕೇಜ್ರಿವಾಲ್ ಒಬ್ಬ ವ್ಯಕ್ತಿಯಲ್ಲ. ಅದೊಂದು ಸಿದ್ಧಾಂತ’ ಎಂದು ಅವರು ನುಡಿದಿದ್ದಾರೆ.
‘ಇಂದು ಅವರು ಎಲ್ಲಾ ಗೆರೆಗಳನ್ನು ಮೀರಿದ್ದಾರೆ. ಈ ಹೋರಾಟದಲ್ಲಿ ದೆಹಲಿಯ ಜನ ನಮ್ಮೊಂದಿಗೆ ಕೈ ಜೋಡಿಸಬೇಕು’ ಎಂದು ಅವರು ಮನವಿ ಮಾಡಿದರು.
ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಅರವಿಂದ ಕೇಜ್ರಿವಾಲ್ ಅವರನ್ನು ಗುರುವಾರ ರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.