ನವದೆಹಲಿ: ದೆಹಲಿಯ ಮಾಳವೀಯ ನಗರದ ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿ ಅವರು ವಾಟ್ಸ್‌ಆ್ಯಪ್ ಚಾಟ್‌ವೊಂದರ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ತಮ್ಮನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸಲಾಗಿದೆ. ಇದರ ಹಿಂದೆ ಬಿಜೆಪಿಯ ಕೈವಾಡವಿರುವ ಶಂಕೆ ಇದೆ ಎಂದು ಆರೋಪಿಸಿದ್ದಾರೆ.
‘ನನ್ನನ್ನು ಹನಿಟ್ರ್ಯಾಪ್ ಮಾಡುವ ಪ್ರಯತ್ನ ನಿನ್ನೆ ನಡೆಯಿತು. ಹಿಂದೆಂದೂ ಈ ರೀತಿಯ ಘಟನೆ ನಡೆದಿಲ್ಲ. ಇದರ ಹಿಂದೆ ಬಿಜೆಪಿ ಕೈವಾಡವಿರುವ ಬಲವಾದ ಶಂಕೆ ಇರುವುದರಿಂದ ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕು ಎಂದು ನಾನು ಪ್ರಾಮಾಣಿಕವಾಗಿ ಒತ್ತಾಯಿಸುತ್ತಿದ್ದೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
9093*****7 ಸಂಖ್ಯೆಯಿಂದ ಬಂದ ವಾಟ್ಸಾಪ್ ಸಂದೇಶ, ಅದಕ್ಕೆ ತಾವು ನೀಡಿರುವ ಪ್ರತಿಕ್ರಿಯೆ ಸ್ಕ್ರೀನ್‌ಶಾಟ್‌ಗಳನ್ನು ಸೋಮನಾಥ್ ಭಾರ್ತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಾನು ಗುಜರಾತ್ ಮೂಲದ ಅಂಜಲಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು, ಶಾಸಕ ಸೋಮನಾಥ ಭಾರ್ತಿ ಅವರೊಂದಿಗೆ ಆತ್ಮೀಯವಾಗಿ ಮಾತನಾಡಲು ಪ್ರಯತ್ನಿಸಿದ್ದಾರೆ.
ಇದು ತಮ್ಮನ್ನು ಸಿಲುಕಿಸುವ ಪ್ರಯತ್ನವೇ? ಎಂದು ಪ್ರತಿಕ್ರಿಯೆ ನೀಡಿರುವ ಸೋಮನಾಥ ಭಾರ್ತಿ, ನಿಜ ಹೇಳುವಂತೆ ವ್ಯಕ್ತಿಗೆ ಒತ್ತಾಯಿಸಿದ್ದಾರೆ. ನಿಜ ಹೇಳದೇ ಹೋದರೆ ಪೊಲೀಸರಿಗೆ ತಿಳಿಸುವುದಾಗಿ ಎಚ್ಚರಿಸಿರುವುದೂ ವಾಟ್ಸ್‌ಆ್ಯಪ್ ಚಾಟ್‌ನಿಂದ ಗೊತ್ತಾಗಿದೆ.
ಬಿಜೆಪಿಯು ದೆಹಲಿಯ ಎಎಪಿ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡುತ್ತಿದ್ದು, 40 ಶಾಸಕರನ್ನು ಸಂಪರ್ಕಿಸಿ ತಲಾ ₹20 ಕೋಟಿಯಂತೆ ₹800 ಕೋಟಿ ನೀಡುವುದಾಗಿ ಆಮಿಷವೊಡ್ಡಿದೆ ಎಂದು ಎಎಪಿ ಗುರುವಾರ ಆರೋಪ ಮಾಡಿದೆ. ಈ ₹800 ಕೋಟಿ ಹಣದ ಮೂಲ ಯಾವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಬಿಜೆಪಿಯಿಂದ ನಡೆಯುತ್ತಿದೆ ಎನ್ನಲಾದ ‘ಆಪರೇಷನ್ ಕಮಲ’ದ ಹಿನ್ನೆಲೆಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಶಾಸಕರ ಸಭೆ ನಡೆಸಿದರು. ಒಟ್ಟು 62 ಶಾಸಕರ ಪೈಕಿ 53 ಶಾಸಕರು ಸಭೆಗೆ ಹಾಜರಾಗಿದ್ದರು. ಇನ್ನುಳಿದವರು ನಾನಾ ಕಾರಣಗಳಿಂದ ಗೈರಾಗಿರುವುದಾಗಿ ಪಕ್ಷ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.