ADVERTISEMENT

1,100 ಮರ ಕಡಿಯಲು ಅನುಮತಿ ನೀಡಿರುವ ಆರೋಪ: ಲೆ.ಗವರ್ನರ್‌ ರಾಜೀನಾಮೆಗೆ AAP ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 14:10 IST
Last Updated 26 ಆಗಸ್ಟ್ 2024, 14:10 IST
ಲೆಫ್ಟಿನೆಂಟ್‌ ಗವರ್ನರ್‌ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಚಿವ ಸೌರಭ್‌ ಭಾರಧ್ವಜ್‌ ಸುದ್ದಿಗೋಷ್ಠಿಯಲ್ಲಿ ತೋರಿಸಿದರು – ಪಿಟಿಐ ಚಿತ್ರ
ಲೆಫ್ಟಿನೆಂಟ್‌ ಗವರ್ನರ್‌ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಚಿವ ಸೌರಭ್‌ ಭಾರಧ್ವಜ್‌ ಸುದ್ದಿಗೋಷ್ಠಿಯಲ್ಲಿ ತೋರಿಸಿದರು – ಪಿಟಿಐ ಚಿತ್ರ   

ನವದೆಹಲಿ: ದೆಹಲಿಯ ಗುಡ್ಡಗಾಡು ಪ್ರದೇಶದಲ್ಲಿನ 1,100 ಮರಗಳನ್ನು ಕಡಿಯಲು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಅನುಮತಿ ನೀಡಿದ್ದಾರೆ ಎಂದು ಸೋಮವಾರ ಆರೋಪಿಸಿರುವ ಎಎಪಿ, ಅವರ ರಾಜೀನಾಮೆಗೆ ಆಗ್ರಹಿಸಿದೆ.

ಈ ಬಗ್ಗೆ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಸಚಿವ ಸೌರಭ್ ಭಾರಧ್ವಜ್‌ ಅವರು, ‘ಯೋಜನೆಗೆ ಸಂಬಂಧಿಸಿದ ಗುತ್ತಿಗೆದಾರರೊಬ್ಬರು ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ಮರಗಳನ್ನು ಉರುಳಿಸಲು ಲೆಫ್ಟಿನೆಂಟ್‌ ಗವರ್ನರ್‌ ಅನುಮತಿ ನೀಡಿರುವುದನ್ನು ಉಲ್ಲೇಖಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಲೆಫ್ಟಿನೆಂಟ್‌ ಗವರ್ನರ್‌ ತಕ್ಷಣವೇ ರಾಜೀನಾಮೆ ನೀಡಲಿ ಮತ್ತು ಆರೋಪಮುಕ್ತರಾಗಿ ಬರಲಿ’ ಎಂದರು.

ರಸ್ತೆ ವಿಸ್ತರಣೆಗಾಗಿ ಅರಣ್ಯದಲ್ಲಿನ 1,100 ಮರಗಳನ್ನು ತೆರವುಗೊಳಿಸಿರುವ ಆರೋಪದಡಿ ಡಿಡಿಎ ಉಪ ಮುಖ್ಯಸ್ಥರ ವಿರುದ್ಧ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿದೆ.

‘ಬಿಜೆಪಿ ಮತ್ತು ಲೆಫ್ಟಿನೆಂಟ್ ಗವರ್ನರ್‌ ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಸ್ಥಿತಿ ಇದೆ’ ಎಂದು ಎಎಪಿ ನಾಯಕ ಸಂಜಯ್ ಸಿಂಗ್‌ ಆರೋಪಿಸಿದ್ದಾರೆ.

‘ಮೂಲ ಯೋಜನೆಯ ಪ್ರಕಾರ ರಸ್ತೆ ನಿರ್ಮಾಣಕ್ಕಾಗಿ ಫಾರ್ಮ್‌ಹೌಸ್‌ ಸುತ್ತಮುತ್ತಲಿನ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಫಾರ್ಮ್‌ಹೌಸ್‌ ರಕ್ಷಣೆಗಾಗಿ ಮರಗಳನ್ನು ಕಡಿಯಲಾಗಿದೆ. ಇದರ ಹಿಂದೆ ಏನಾದರೂ ‘ಡೀಲ್‌ ಇದೆಯೇ‘’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.