ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಎಎಪಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿದ್ದು, ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎಎಪಿ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
ಕಾಂಗ್ರೆಸ್–ಎಎಪಿ ಮೈತ್ರಿ ಹಾಗೂ ಸೀಟು ಹಂಚಿಕೆ ಬಗ್ಗೆ ಸೋಮವಾರ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಎಎಪಿ ಪಕ್ಷದ ಮೂಲಗಳು ಹೇಳಿವೆ.
‘ಕಾಂಗ್ರೆಸ್‌ನ ಹರಿಯಾಣ ಉಸ್ತುವಾರಿ ದೀಪಕ್ ಬಾಬರಿಯಾ ಮತ್ತು ಎಎಪಿ ನಾಯಕ ರಾಘವ್ ಛಡ್ಡಾ ನಡುವಣ ಮಾತುಕತೆಯು ಸಕಾರಾತ್ಮಕ ದಿಕ್ಕಿನಲ್ಲಿ ಸಾಗಿದೆ. ಮೈತ್ರಿಗೆ ಸೋಮವಾರದ ವೇಳೆಗೆ ಅಂತಿಮ ರೂಪ ಸಿಗುವ ಸಾಧ್ಯತೆಯಿದ್ದು, ನಮ್ಮ ಪಕ್ಷವು ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದೆ’ ಎಂದು ತಿಳಿಸಿವೆ.
ಭಾನುವಾರ ಬೆಳಿಗ್ಗೆ ಮಾತನಾಡಿದ್ದ ಎಎಪಿ ರಾಜ್ಯಸಭಾ ಸದಸ್ಯ ಛಡ್ಡಾ, ‘ಕಾಂಗ್ರೆಸ್ ಮತ್ತು ಎಎಪಿಯು ತಮ್ಮ ವೈಯಕ್ತಿಕ ಆಕಾಂಕ್ಷೆಗಳನ್ನು ಬದಿಗಿಟ್ಟು ಹರಿಯಾಣ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ’ ಎಂದಿದ್ದರು. ಸೀಟು ಹಂಚಿಕೆ ಬಗ್ಗೆ ಒಮ್ಮತ ಮೂಡದಿದ್ದರೂ, ಮಾತುಕತೆ ‘ಸಕಾರಾತ್ಮಕ’ ದಿಕ್ಕಿನಲ್ಲಿ ಮುಂದುವರಿದಿದೆ ಎಂದು ಹೇಳಿದ್ದರು.
ಹರಿಯಾಣ ವಿಧಾನಸಭೆಯ 90 ಸ್ಥಾನಗಳಿಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಸೆಪ್ಟೆಂಬರ್ 12 ಕೊನೆಯ ದಿನ.
ಆದಿತ್ಯ ದೇವಿ ಲಾಲ್ ಐಎನ್‌ಎಲ್‌ಡಿಗೆ ಸೇರ್ಪಡೆ: ಮಾಜಿ ಉಪಪ್ರಧಾನಿ ದೇವಿ ಲಾಲ್ ಅವರ ಪುತ್ರ, ಬಿಜೆಪಿ ಮುಖಂಡ ಆದಿತ್ಯ ದೇವಿ ಲಾಲ್ ಅವರು ಇಂಡಿಯನ್ ನ್ಯಾಷನಲ್ ಲೋಕ ದಳ (ಐಎನ್‌ಎಲ್‌ಡಿ) ಪಕ್ಷಕ್ಕೆ ಭಾನುವಾರ ಸೇರಿಕೊಂಡರು. ಪಕ್ಷವು ಅವರಿಗೆ ಡಬ್ವಾಲಿ ಕ್ಷೇತ್ರದ ಟಿಕೆಟ್ ನೀಡಿದೆ.
46 ವರ್ಷದ ಆದಿತ್ಯ ಅವರು ಸಿರ್ಸಾ ಜಿಲ್ಲೆಯ ಚೌಟಾಲಾ ಗ್ರಾಮದಲ್ಲಿ ನಡೆದ ರ್‍ಯಾಲಿಯಲ್ಲಿ ಪಕ್ಷದ ಹಿರಿಯ ನಾಯಕ ಅಭಯ್ ಸಿಂಗ್ ಚೌಟಾಲಾ ಅವರ ಸಮ್ಮುಖದಲ್ಲಿ ಪಕ್ಷವನ್ನು ಸೇರಿಕೊಂಡರು. ಆದಿತ್ಯ ಅವರ ನಿರ್ಧಾರವು ಚುನಾವಣೆಗೆ ಕೆಲವೇ ದಿನಗಳಿರುವಾಗ ಸಿರ್ಸಾ ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟುಮಾಡಿದೆ.
ರಾಜೀನಾಮೆ ಅಂಗೀಕಾರ
ನವದೆಹಲಿ: ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಉತ್ತರ ರೈಲ್ವೆಯ ಮೂಲಗಳು ಭಾನುವಾರ ತಿಳಿಸಿವೆ.
‘ರೈಲ್ವೆ ಉದ್ಯೋಗಿ ರಾಜೀನಾಮೆ ನೀಡಿದ ನಂತರ ಮೂರು ತಿಂಗಳ ನೋಟಿಸ್ ಅವಧಿಯನ್ನು ಪೂರೈಸುವ ನಿಬಂಧನೆಯನ್ನು ಈ ಇಬ್ಬರ ಮಟ್ಟಿಗೆ ಸಡಿಲಿಸಲು ನಾವು ನಿರ್ಧರಿಸಿದ್ದೇವೆ. ಇಬ್ಬರನ್ನೂ ಸಾಧ್ಯವಾದಷ್ಟು ಬೇಗ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುವುದು’ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕಾಂಗ್ರೆಸ್‌ನಿಂದ ಕಳಂಕಿತರು ಕಣಕ್ಕೆ’
ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಕಟಿಸಿರುವ 32 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕೆಲವು ‘ಕಳಂಕಿತರು’ ಇದ್ದಾರೆ ಎಂದು ಬಿಜೆಪಿ ನಾಯಕ ಅನಿಲ್ ವಿಜ್ ಹೇಳಿದ್ದಾರೆ.
‘ಅಧಿಕಾರವನ್ನು ಕಾಂಗ್ರೆಸ್‌ಗೆ ನೀಡುವುದು ತುಂಬಾ ಅಪಾಯಕಾರಿ ಎಂಬುದು ಜನರಿಗೆ ತಿಳಿದಿದೆ. ಬಿಜೆಪಿಯು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ’ ಎಂದು ಭಾನುವಾರ ತಿಳಿಸಿದ್ದಾರೆ.
‘ಸೋನೀಪತ್ ಕ್ಷೇತ್ರದ ಸ್ಪರ್ಧಿ, ಶಾಸಕರೂ ಆಗಿರುವ ಸುರೇಂದರ್ ಪನ್ವರ್ ಅವರು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈಲಲ್ಲಿದ್ದಾರೆ. ಭೂಪಿಂದರ್ ಸಿಂಗ್ ಹೂಡಾ ಅವರ ಮೇಲೂ ಪ್ರಕರಣಗಳು ಇವೆ. ಮತ್ತೊಬ್ಬ ಶಾಸಕ ಮಾಮನ್ ಖಾನ್ ಅವರು ನೂಹ್ ಗಲಭೆಗೆ ಸಂಬಂಧಿಸಿದ ಪ್ರಕರಣ ಎದುರಿಸುತ್ತಿದ್ದಾರೆ’ ಎಂದು ವಿಜ್ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.