ನವದೆಹಲಿ: ಪಕ್ಷದ ರಾಮರಾಜ್ಯ ಪರಿಕಲ್ಪನೆಯನ್ನು ಪ್ರದರ್ಶಿಸುವ ‘ಆಪ್ ಕಾ ರಾಮರಾಜ್ಯ’ ವೆಬ್‌ಸೈಟ್ ಅನ್ನು ಆಮ್ ಆದ್ಮಿ ಪಕ್ಷ ಬುಧವಾರ ಲೋಕಾರ್ಪಣೆ ಮಾಡಿತು.
ವೆಬ್‌ಸೈಟ್ ಬಿಡುಗಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಈ ವೆಬ್‌ಸೈಟ್ ಎಎಪಿಯ ರಾಮರಾಜ್ಯ ಪರಿಕಲ್ಪನೆಯನ್ನು ಮತ್ತು ಪಕ್ಷ ಮಾಡಿದ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತದೆ ಎಂದರು.
‘ಕಳೆದ 10 ವರ್ಷಗಳಲ್ಲಿ ರಾಮರಾಜ್ಯ ಪರಿಕಲ್ಪನೆ ಸಾಕಾರಗೊಳಿಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದೆಹಲಿಯಲ್ಲಿ ಅದ್ಭುತವಾದ ಕೆಲಸಗಳನ್ನು ಮಾಡಿದ್ದಾರೆ. ಉತ್ತಮ ಶಾಲೆಗಳು, ಮೊಹಲ್ಲಾ ಚಿಕಿತ್ಸಾಲಯಗಳು, ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹೀಗೆ ಅನೇಕ ಯೋಜನೆಗಳನ್ನು ತರಲಾಗಿದೆ’ ಎಂದರು.
‘ರಾಮನವಮಿಯಂದು ಕೇಜ್ರಿವಾಲ್ ತಮ್ಮ ಜನರ ನಡುವೆ ಇಲ್ಲದಿರುವುದು ಇದೇ ಮೊದಲು. ಕೇಜ್ರಿವಾಲ್ ಅವರನ್ನು ಆಧಾರರಹಿತ ಪ್ರಕರಣದಲ್ಲಿ ಸುಳ್ಳು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಜೈಲಿಗೆ ಕಳುಹಿಸಲಾಗಿದೆ’ ಎಂದು ಆರೋಪಿಸಿದರು.
ಈ ವೇಳೆ ಸಚಿವೆ ಅತಿಶಿ, ಪಕ್ಷದ ಮುಖಂಡರಾದ ಸೌರಭ್ ಭಾರದ್ವಾಜ್ ಮತ್ತು ಜಾಸ್ಮಿನ್ ಶಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.