ADVERTISEMENT

ಹರಿಯಾಣ ವಿಧಾನಸಭೆ ಚುನಾವಣೆ: ‘ಕೇಜ್ರಿವಾಲ್‌ ಗ್ಯಾರಂಟಿ’ಗಳಿಗೆ ಎಎಪಿ ಚಾಲನೆ

ಪಿಟಿಐ
Published 20 ಜುಲೈ 2024, 15:11 IST
Last Updated 20 ಜುಲೈ 2024, 15:11 IST
ಎಎಪಿ ಲಾಂಛನ
ಎಎಪಿ ಲಾಂಛನ   

ಚಂಡೀಗಢ: ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಹರಿಯಾಣದಲ್ಲಿ ಆಮ್‌ ಆದ್ಮಿ ಪಕ್ಷವು (ಎಎಪಿ) ‘ಕೇಜ್ರೀವಾಲ್‌ ಗ್ಯಾರಂಟಿ’ಗಳ ಅನುಷ್ಠಾನದ ಭರವಸೆಯನ್ನು ನೀಡಿದೆ. 

ಗೃಹ ಸಂಪರ್ಕಗಳಿಗೆ ಉಚಿತ ವಿದ್ಯುತ್, ಮೊಹಲ್ಲಾ ಕ್ಲಿನಿಕ್‌‌ಗಳನ್ನು ಸ್ಥಾಪಿಸಿ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡುವುದು, ಉಚಿತ ಶಿಕ್ಷಣ, ಪ್ರತಿಯೊಬ್ಬ ಮಹಿಳೆಗೆ ಮಾಸಿಕ ₹1000 ನಗದು ನೆರವು, ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ‘ಗ್ಯಾರಂಟಿ’ಯನ್ನು ಪ್ರಸ್ತಾಪಿಸಿದೆ.

ದೆಹಲಿ ಸಿ.ಎಂ ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಶನಿವಾರ ಇಲ್ಲಿ ಗ್ಯಾರಂಟಿ ಭರವಸೆಗಳನ್ನು ಪ್ರಕಟಿಸಿದರು. ಹರಿಯಾಣದಲ್ಲಿ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿದೆ.

ADVERTISEMENT

ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌, ಎಎಪಿಯ ಹಿರಿಯ ನಾಯಕರಾದ ಸಂಜಯ್‌ ಸಿಂಗ್, ಸಂದೀಪ್ ಪಾಠಕ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಂಗ್ ಅವರು, ಎಎಪಿ ಸ್ವಬಲದಿಂದಲೇ ಹರಿಯಾಣದಲ್ಲಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಗ್ನಿಪಥ್ ಸೇರಿದಂತೆ ಹಲವು ಯೋಜನೆ ಉಲ್ಲೇಖಿಸಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಬಿಜೆಪಿ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಆದರೆ ಎಎಪಿ ಗ್ಯಾರಂಟಿಗಳನ್ನು ನೀಡುತ್ತಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.