ನವದೆಹಲಿ: ತಿಹಾರ್ ಜೈಲಿನಲ್ಲಿ ಕುಸಿದು ಬಿದ್ದು ಆಸ್ಪತ್ರೆ ಸೇರಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದ್ರ ಜೈನ್ ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಿಸಲಾಗಿದೆ. ದೆಹಲಿಯ ಮಾಜಿ ಸಚಿವರೂ ಆಗಿರುವ ಜೈನ್ ಅವರು ಇಂದು (ಗುರುವಾರ) ಬೆಳಗ್ಗೆ ಸ್ನಾನಗೃಹದಲ್ಲಿ ತಲೆ ತಿರುಗಿ ಬಿದ್ದಿದ್ದರು.
ಜೈನ್ ಅವರನ್ನು ಮೊದಲು ದೀನ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲೋಕ ನಾಯಕ ಜೈ ಪ್ರಕಾಶ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜೈನ್ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬಂಧಿಸಿದೆ.
ಜೈನ್ ಈ ಹಿಂದೆಯೂ ಸ್ನಾನಗೃಹದಲ್ಲಿ ಬಿದ್ದಿದ್ದರು. ಅದರ ಪರಿಣಾಮವಾಗಿ ಅವರ ಬೆನ್ನು ಮೂಳೆಗೆ ಗಂಭೀರವಾದ ಗಾಯವಾಗಿತ್ತು ಎಂದು ಎಎಪಿ ಹೇಳಿದೆ.
ವಿಚಾರಣಾಧೀನ ಕೈದಿ ಸತ್ಯೇಂದ್ರ ಜೈನ್ ಅವರು ಬೆಳಿಗ್ಗೆ 6 ಗಂಟೆ ಸುಮಾರಿನಲ್ಲಿ ಸ್ನಾನಗೃಹದಲ್ಲಿ ಕುಸಿದುಬಿದ್ದಿದ್ದರು. ಅವರನ್ನು ಕೇಂದ್ರ ಕಾರಾಗೃಹದ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಿಶ್ಯಕ್ತಿಯಿಂದ ಬಳಲುತ್ತಿರುವ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಅವರನ್ನು ಪರೀಕ್ಷಿಸಿದ ವೈದ್ಯರು ಅವರ ಆರೋಗ್ಯ ಸಾಮಾನ್ಯವಾಗಿದೆ ಎಂದಿದ್ದಾರೆ. ಬೆನ್ನು, ಕಾಲು ಮತ್ತು ಭುಜದ ನೋವು ಅನುಭವಿಸುತ್ತಿದ್ದ ಜೈನ್ ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈನ್ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. 'ಈ ಪ್ರತಿಕೂಲ ಸನ್ನಿವೇಶದ ವಿರುದ್ಧ ಹೋರಾಡಲು ದೇವರು ಅವರಿಗೆ ಶಕ್ತಿ ನೀಡಲಿ' ಎಂದು ಪ್ರಾರ್ಥಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.