ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಮುಖಂಡ ಮತ್ತು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಇಲ್ಲಿನ ರಾವುಜ್ ಅವೆನ್ಯೂ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.
ಇಂದಿನವರೆಗೂ ಅವರನ್ನು ಕೋರ್ಟ್ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ನೀಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಜೈನ್ ಅವರ ನಿವಾಸ ಮತ್ತು ಸಂಬಂಧಿತ ಇತರ ಸ್ಥಳಗಳಲ್ಲಿ ಇ.ಡಿ ಶೋಧ ಕಾರ್ಯಾಚರಣೆ ನಡೆಸಿತ್ತು. ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ₹2.85 ಕೋಟಿ ನಗದು ಮತ್ತು 133 ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
ಜೈನ್ ಅವರನ್ನು ‘ಅತ್ಯಂತ ಪ್ರಾಮಾಣಿಕ ಮತ್ತು ದೇಶಭಕ್ತ’ ಎಂದು ಸಮರ್ಥಿಸಿಕೊಂಡಿರುವ ಕೇಜ್ರಿವಾಲ್, ‘ಜೈನ್ ಅವರು ಸುಳ್ಳು ಪ್ರಕರಣದಲ್ಲಿ ಸಿಲುಕಿದ್ದಾರೆ. ಅವರಿಗೆ ಸಿಬಿಐ ಕ್ಲೀನ್‌ಚಿಟ್ ನೀಡಿದೆ. ಈಗ ಇ.ಡಿ ತನಿಖೆಯ ಬಳಿಕ ಅವರು ಹೊರಬರುವ ನಂಬಿಕೆ ಇದೆ’ ಎಂದು ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.
ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೊಹಲ್ಲಾ ಕ್ಲಿನಿಕ್ ಮಾದರಿಯನ್ನು ಪರಿಚಯಿಸಿದ್ದಕ್ಕಾಗಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಬೇಕು ಎಂದೂ ಕೇಜ್ರಿವಾಲ್ ಆಗ್ರಹಿಸಿದ್ದರು.
ಜೈನ್ ಅವರು ದೆಹಲಿಯ ಆರೋಗ್ಯ, ಕೈಗಾರಿಕೆ, ವಿದ್ಯುತ್, ಗೃಹ, ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.