ADVERTISEMENT

ಎಸಿಬಿ ಅಧಿಕಾರಿಯನ್ನು ಥಳಿಸಿದ ಎಎಪಿ ಶಾಸಕ ಅಮಾನತುಲ್ಲಾ ಬೆಂಬಲಿಗರು: ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2022, 7:31 IST
Last Updated 18 ಸೆಪ್ಟೆಂಬರ್ 2022, 7:31 IST
ಅಧಿಕಾರಿಯೊಬ್ಬರನ್ನು ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬೆಂಬಲಿಗರು ಥಳಿಸುತ್ತಿರುವ ದೃಶ್ಯ (ಟ್ವಿಟರ್ ಚಿತ್ರ)
ಅಧಿಕಾರಿಯೊಬ್ಬರನ್ನು ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬೆಂಬಲಿಗರು ಥಳಿಸುತ್ತಿರುವ ದೃಶ್ಯ (ಟ್ವಿಟರ್ ಚಿತ್ರ)   

ನವದೆಹಲಿ: ದೆಹಲಿಯ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬೆಂಬಲಿಗರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ)ಅಧಿಕಾರಿಯೊಬ್ಬರನ್ನು ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಅಮಾನತುಲ್ಲಾ ಬೆಂಬಲಿಗರ ಗುಂಪೊಂದು ಎಸಿಬಿ ಅಧಿಕಾರಿಯೊಬ್ಬರನ್ನು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಕ್ಫ್ ಮಂಡಳಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಅಮಾನತುಲ್ಲಾ ಖಾನ್ ಅವರನ್ನು ಶುಕ್ರವಾರ ಬಂಧಿಸಿದ್ದರು.

ADVERTISEMENT

ಖಾನ್‌ ಅವರ ನಿವಾಸ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಎಸಿಬಿ ಶೋಧ ಕಾರ್ಯಾಚರಣೆ ನಡೆಸಿದ್ದು, ದಾಳಿ ವೇಳೆ ₹24 ಲಕ್ಷ ಹಣ, ಪರವಾನಗಿ ಪಡೆಯದೆ ಇಟ್ಟುಕೊಂಡಿದ್ದ ಎರಡು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿತ್ತು.

ವಕ್ಫ್ ಮಂಡಳಿಗೆ ಸಂಬಂಧಿಸಿದ ನೇಮಕಾತಿ ಅಕ್ರಮಗಳ ಕುರಿತು ಎಸಿಬಿ ತನಿಖೆ ನಡೆಸುತ್ತಿದೆ.

2020ರ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಖಾನ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು.

ವಕ್ಫ್ ಮಂಡಳಿಯ ಹೊಸ ಕಚೇರಿಯನ್ನು ನಿರ್ಮಿಸಿದ ಕಾರಣ ತಮಗೆ ಸಮನ್ಸ್ ನೀಡಲಾಗಿದೆ ಎಂದು ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷ ಖಾನ್ ಅವರು ನೋಟಿಸ್ ಕುರಿತು ಟ್ವೀಟ್ ಮಾಡಿದ್ದರು.

ಖಾನ್ ಆಪ್ತ ಸಹಾಯಕನ ಸೆರೆ
ಎಸಿಬಿ ದಾಳಿ ನಡೆಸಿದ ಬಳಿಕ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರ ಆಪ್ತ ಹಮೀದ್ ಅಲಿ ಅವರನ್ನು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ದಾಳಿ ವೇಳೆ ಲೈಸೆನ್ಸ್‌ರಹಿತ ಪಿಸ್ತೂಲು, ₹ 12 ಲಕ್ಷ ನಗದು ಹಾಗೂ ಕೆಲವು ಗುಂಡುಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.