ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ಕುರಿತಾಗಿ ಕಲಾಪ ನಡೆಯುತ್ತಿದ್ದ ವೇಳೆ ಅಡ್ಡಿಯನ್ನುಂಟು ಮಾಡಿದ ಆಮ್ ಆದ್ಮಿ ಪಕ್ಷದ(ಎಎಪಿ) ಮೂವರು ಸಂಸದರನ್ನು ಸಭಾಧ್ಯಕ್ಷರು ಒಂದು ದಿನ ಮಟ್ಟಿಗೆ ಅಮಾನತು ಮಾಡಿದ್ದಾರೆ.
ರಾಷ್ಟ್ರಪತಿ ಅವರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಎಎಪಿ ಸಂಸದರು, ಮೇಲ್ಮನೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸಭಾಧ್ಯಕ್ಷರಾದ ಎಂ.ವೆಂಕಯ್ಯನಾಯ್ಡು ಅವರು ಹಲವು ಬಾರಿ ಸಂಸದರಿಗೆ ತಮ್ಮ ಸ್ಥಾನಗಳಿಗೆ ಮರಳುವಂತೆ ಸೂಚಿಸಿದ್ದಾರೆ. ಆದರೆ ಇದಕ್ಕೆ ಕಿವಿಗೊಡದ ಎಎಪಿ ಸಂಸದರು, ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.
ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು, ಸಂಜೀವ್ ಸಿಂಗ್ ಸೇರಿದಂತೆ ಮೂವರು ಸಂಸದರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ, ಅವರನ್ನು ರಾಜ್ಯಸಭೆಯಿಂದ ಹೊರನಡೆಯುವಂತೆ ಸೂಚಿಸಿದ್ದಾರೆ. ಆದರೂ ಸಂಸದರು ಪ್ರತಿಭಟನೆ ಮುಂದುವರಿಸಿದ ಕಾರಣ, ಕಲಾಪವನ್ನು ಸ್ವಲ್ಪ ಸಮಯಕ್ಕೆ ಮುಂದೂಡಲಾಯಿತು.
ಕಲಾಪ ಪುನರಾರಂಭಗೊಂಡ ಬಳಿಕವೂ ಸಂಸದರು ಅಲ್ಲೇ ಇದ್ದ ಕಾರಣ ಅವರನ್ನು ರಾಜ್ಯಸಭೆಯಿಂದ ಹೊರ ಕರೆದುಕೊಂಡು ಹೋಗುವಂತೆ ಸಭಾಧ್ಯಕ್ಷರು ಮಾರ್ಷಲ್‌ಗಳಿಗೆ ಸೂಚಿಸಿದರು.
ಸಂಜಯ್ ಸಿಂಗ್, ಸುಶೀಲ್ ಕುಮಾರ್ ಗುಪ್ತಾ, ಎನ್.ಡಿ ಗುಪ್ತಾ ಅವರನ್ನು 255 ನೇ ನಿಯಮ ಪ್ರಕಾರ ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.