ADVERTISEMENT

Haryana polls | ಮೈತ್ರಿ ಮಾತುಕತೆ ವಿಫಲ?: ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ AAP

ಪಿಟಿಐ
Published 9 ಸೆಪ್ಟೆಂಬರ್ 2024, 10:49 IST
Last Updated 9 ಸೆಪ್ಟೆಂಬರ್ 2024, 10:49 IST
ಎಎಪಿ ಲಾಂಛನ
ಎಎಪಿ ಲಾಂಛನ   

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾತುಕತೆಯಲ್ಲಿ ಯಾವುದೇ ಪ್ರಗತಿಯಾಗದ ಕಾರಣ, ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಎಎಪಿ ಸೋಮವಾರ ಘೋಷಿಸಿದೆ. ಅಲ್ಲದೆ 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಈ ಮೂಲಕ ಕಾಂಗ್ರೆಸ್‌– ಎಎಪಿ ಮೈತ್ರಿ ಕುರಿತ ಕುತೂಹಲಕ್ಕೆ ತೆರೆಬಿದ್ದಿದೆ.

ಎರಡೂ ಪಕ್ಷಗಳ ಜತೆ ಕೆಲ ದಿನಗಳಿಂದ ಮೈತ್ರಿ ಮಾತುಕತೆ ನಡೆಯುತ್ತಿತ್ತು. ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಳ್ಳದ ಕಾರಣ, ಮಾತುಕತೆ ಫಲಪ್ರದವಾಗಲಿಲ್ಲ. ನಾಮಪತ್ರ ಸಲ್ಲಿಕೆ ಇದೇ 12ಕ್ಕೆ ಕೊನೆಗೊಳ್ಳಲಿರುವ ಕಾರಣ, ತ್ವರಿತವಾಗಿ ಅಭ್ಯರ್ಥಿಗಳನ್ನು ಘೋಷಿಸಲು ಎಎಪಿ ನಿರ್ಧರಿಸಿದೆ.

ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್‌ 5ರಂದು ಮತದಾನ ನಡೆಯಲಿದೆ.

ADVERTISEMENT

ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಎಎಪಿ ಹರಿಯಾಣ ಘಟಕದ ಅಧ್ಯಕ್ಷ ಸುಶಿಲ್‌ ಗುಪ್ತಾ, ‘ನಾವು ಆರಂಭದಿಂದಲೇ ಎಲ್ಲ 90 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೆವು. ಚುನಾವಣೆಗೆ ಹೆಚ್ಚಿನ ಸಮಯವಿಲ್ಲ, ನಾಮಪತ್ರ ಸಲ್ಲಿಸಲು ಇದೇ 12 ಕೊನೆಯ ದಿನ. ಹೀಗಾಗಿ ಕಾಯುವುದು ಮುಗಿದಿದೆ’ ಎಂದಿದ್ದಾರೆ.

‘ಹರಿಯಾಣದಲ್ಲಿ ಎಎಪಿ ಬಲಿಷ್ಠ ಪರ್ಯಾಯ ಪಕ್ಷವಾಗಿದ್ದು, ಶೀಘ್ರದಲ್ಲಿಯೇ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನೂ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದ್ದಾರೆ.

‘ಸೀಟು ಹಂಚಿಕೆ ಪ್ರಕ್ರಿಯೆ ಕುರಿತು ಕಾಂಗ್ರೆಸ್‌ ಸೋಮವಾರ ಸಂಜೆಯೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳದಿದ್ದರೆ, ಎಎಪಿ ಎಲ್ಲ 90 ಸೀಟುಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ’ ಎಂದು ಗುಪ್ತಾ ಅವರು ಬೆಳಿಗ್ಗೆಯೇ ಸೂಚನೆ ನೀಡಿದ್ದರು.

10 ಕ್ಷೇತ್ರಕ್ಕೆ ಪಟ್ಟು ಹಿಡಿದಿದ್ದ ಎಎಪಿ:

ಮೂಲಗಳ ಪ್ರಕಾರ, ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿಯು 10 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆಯಿಟ್ಟಿತ್ತು. ಇದಕ್ಕೆ ಒಪ್ಪದ ಕಾಂಗ್ರೆಸ್‌ ಐದು ಕ್ಷೇತ್ರಗಳನ್ನು ಬಿಟ್ಟುಕೊಡಲು ಸಮ್ಮತಿಸಿತ್ತು.

ಕಾಂಗ್ರೆಸ್‌ ಹಿರಿಯ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಅವರು ಹಿಡಿತ ಹೊಂದಿರುವ ಕಲಾಯತ್‌ ಕ್ಷೇತ್ರದಿಂದ ಎಎಪಿ ಹರಿಯಾಣ ಘಟಕದ ಉಪಾಧ್ಯಕ್ಷ ಅನುರಾಗ್‌ ಧಂಡ ಸ್ಪರ್ಧಿಸಲಿದ್ದಾರೆ.

ಭಿವಾನಿಯಿಂದ ಇಂದು ಶರ್ಮಾ, ಮೆಹಮ್‌ನಿಂದ ವಿಕಾಶ್‌ ನೆಹ್ರಾ, ರೋಹ್ಟಕ್‌ನಿಂದ ಬಿಜೇಂದರ್‌ ಹೂಡಾ ಹೆಸರನ್ನು ಎಎಪಿ ಪ್ರಕಟಿಸಿದೆ.

ದೆಹಲಿ ಚುನಾವಣೆ ಮೇಲೆ ಪ್ರಭಾವ?:

ಹರಿಯಾಣದಲ್ಲಿ ಸೀಟು ಹಂಚಿಕೆ ಕುರಿತು ಎಎಪಿ ಮತ್ತು ಕಾಂಗ್ರೆಸ್‌ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿರುವುದು, ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಹರಿಯಾಣ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಕುರಿತು ಎಎಪಿ ತೆಗೆದುಕೊಂಡಿರುವ ನಿರ್ಧಾರವು, ಬಿಜೆಪಿಗೆ ಅನುಕೂಲವಾಗುತ್ತದೆಯೇ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗುಪ್ತಾ, ‘ಹರಿಯಾಣದಿಂದ ಬಿಜೆಪಿ ಆಡಳಿತವನ್ನು ಕೊನೆಗೊಳಿಸುವ ದಿನಗಣನೆ ಆರಂಭವಾಗಿದೆ. ನಮ್ಮ ನಿರ್ಧಾರದಿಂದ ಅದಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗಲು ಬಿಡುವುದಿಲ್ಲ’ ಎಂದಿದ್ದಾರೆ.

ಎಎಪಿಯ ಮತ್ತೊಬ್ಬ ನಾಯಕ ಸಂಜಯ್‌ ಸಿಂಗ್‌, ‘ಹರಿಯಾಣ ಚುನಾವಣೆಯಲ್ಲಿ ಪಕ್ಷವು ಪೂರ್ಣ ಬಲದಿಂದ ಸ್ಪರ್ಧಿಸಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಮೈತ್ರಿ ಕುರಿತು ಭಾನುವಾರ ಪ್ರತಿಕ್ರಿಯಿಸಿದ್ದ ಎಎಪಿ ನಾಯಕ ರಾಘವ್‌ ಛಡ್ಡಾ, ‘ಮಾತುಕತೆ ಸಕಾರಾತ್ಮಕ ದಿಕ್ಕಿನಲ್ಲಿ ಸಾಗಿದೆ. ಕಾಂಗ್ರೆಸ್ ಮತ್ತು ಎಎಪಿ ತಮ್ಮ ವೈಯಕ್ತಿಕ ಆಕಾಂಕ್ಷೆಗಳನ್ನು ಬದಿಗಿಟ್ಟು ಹರಿಯಾಣ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.