ADVERTISEMENT

ಎಎಪಿ ನಿರ್ಣಯ: ಕೇಜ್ರಿವಾಲ್‌ಗೆ ಮುಜುಗರ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 19:51 IST
Last Updated 22 ಡಿಸೆಂಬರ್ 2018, 19:51 IST

ನವದೆಹಲಿ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರಿಗೆ ನೀಡಲಾದ ‘ಭಾರತ ರತ್ನ’ವನ್ನು ಹಿಂದಕ್ಕೆ ಪಡೆಯುವಂತೆ ದೆಹಲಿ ಸರ್ಕಾರ ಶುಕ್ರವಾರ ಅಂಗೀಕರಿಸಿದ ನಿರ್ಣಯ ಆಮ್‌ ಆದ್ಮಿ ಪಕ್ಷದಲ್ಲಿ ಆಂತರಿಕ ಕಲಹ ಹುಟ್ಟು ಹಾಕಿದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದ ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ಮುಖಂಡ ಅರವಿಂದ್‌ ಕೇಜ್ರಿವಾಲ್‌ ಈ ಬೆಳವಣಿಗೆಯಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಪಕ್ಷದೊಳಗೆ ಭುಗಿಲೆದ್ದ ಆಂತರಿಕ ಕಲಹ ಶಮನದ ಜತೆ ಮುನಿಸಿಕೊಂಡಿರುವ ಕಾಂಗ್ರೆಸ್‌ ಕೋಪವನ್ನು ತಣಿಸಲು ಕೇಜ್ರಿವಾಲ್‌ ಹರ ಸಾಹಸ ಮಾಡುತ್ತಿದ್ದಾರೆ.

ADVERTISEMENT

ಎಎಪಿ ಶಾಸಕ ಮಂಡಿಸಿದ ನಿರ್ಣಯವನ್ನು ಕಡತಕ್ಕೆ ಸೇರಿಸಿಲ್ಲ ಎಂದು ದೆಹಲಿ ವಿಧಾನಸಭೆಯ ಸ್ಪೀಕರ್‌ ರಾಮ್‌ ನಿವಾಸ್‌ ಗೋಯೆಲ್‌ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

‘ಬಿಜೆಪಿಯ ಬಿ ತಂಡ’ದಂತೆ ಕೆಲಸ ಮಾಡುತ್ತಿರುವ ಎಎಪಿ ನಿಜವಾದ ಬಣ್ಣ ಬಯಲಾಗಿದೆ ಎಂದು ಕಾಂಗ್ರೆಸ್‌ ಹರಿಹಾಯ್ದಿದೆ. ಕೂಡಲೇ ಕ್ಷಮೆ ಕೋರಿ ನಿರ್ಣಯ ಕೈಬಿಡುವಂತೆ ಒತ್ತಾಯಿಸಿದೆ.

ಆಮ್‌ ಆದ್ಮಿ ಸರ್ಕಾರ ರಾಜಕೀಯ ನಾಟಕವಾಡುತ್ತಿದೆ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಆಮ್‌ ಆದ್ಮಿ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು. ನಿರ್ಣಯವನ್ನು ವಿರೋಧಿಸಿ ಹೊರ ನಡೆದ ತಮಗೆ ರಾಜೀನಾಮೆ ನಿಡುವಂತೆ ಪಕ್ಷ ಸೂಚಿಸಿದೆ ಎಂದು ಎಎಪಿ ಶಾಸಕಿ ಅಲ್ಕಾ ಲಾಂಬಾ ಆರೋಪಿಸಿದ್ದಾರೆ.

ಲಾಂಬಾ ಆರೋಪವನ್ನು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ತಳ್ಳಿ ಹಾಕಿದ್ದಾರೆ. ಅಲ್ಕಾ ಲಾಂಬಾ ಮೊದಲು ಕಾಂಗ್ರೆಸ್‌ನಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.