ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಗೆ 20 ಅಭ್ಯರ್ಥಿಗಳ 2 ಮತ್ತು 3ನೇ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ ಬಿಡುಗಡೆ ಮಾಡಿದೆ. ಬಿಜೆಪಿ ತೊರೆದು ಇತ್ತೀಚೆಗೆ ಎಎಪಿ ಸೇರಿದ್ದ ಮಾಜಿ ಸಚಿವ ಛತರ್ ಪಾಲ್ ಸಿಂಗ್ ಅವರನ್ನು ಬರ್ವಾಲಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ಮಾತುಕತೆಯು ಹಲವು ದಿನಗಳ ಚರ್ಚೆ ಬಳಿಕವೂ ಫಲಪ್ರದವಾಗದ ಹಿನ್ನೆಲೆಯಲ್ಲಿ ಸೋಮವಾರ 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಎಪಿ ಬಿಡುಗಡೆ ಮಾಡಿತ್ತು.
ಮಂಗಳವಾರ ಬೆಳಿಗ್ಗೆ 9 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದ ಎಎಪಿ, ತಡರಾತ್ರಿ 11 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಎರಡೂ ಪಟ್ಟಿಗಳಲ್ಲಿ ಹರಿಯಾಣ ಎಎಪಿ ಘಟಕದ ಅಧ್ಯಕ್ಷ ಸುಶೀಲ್ ಗುಪ್ತಾ ಹೆಸರು ಕಂಡುಬಂದಿಲ್ಲ.
ಮೂರನೇ ಪಟ್ಟಿಯಲ್ಲಿ ಗರ್ಹಿ ಸಂಪ್ಲಾ ಕಿಲೋಯ್ ಕ್ಷೇತ್ರದಿಂದ ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ಭೂಪಿಂದರ್ ಸಿಂಗ್ ಹೂಡಾ ವಿರುದ್ಧ ಎಎಪಿ ಪ್ರವೀಣ್ ಗುಸ್ಖಾನಿ ಅವರನ್ನು ಕಣಕ್ಕಿಳಿಸಿದೆ.
ರಾಡೌರ್‌ನಿಂದ ಭೀಮ್ ಸಿಂಗ್ ರಾಠಿ, ನಿಲೋಖೇರಿಯಿಂದ ಅಮರ್ ಸಿಂಗ್, ಇಸ್ರಾನದಿಂದ ಅಮಿತ್ ಕುಮಾರ್, ರಾಯ್‌ನಿಂದ ರಾಜೇಶ್ ಸರೋಹಾ, ಖರ್ಖೌಡಾದಿಂದ ಮಂಜೀತ್ ಫರ್ಮಾನ, ಕಲನೂರ್‌ನಿಂದ ನರೇಶ್ ಬಗ್ರಿ, ಜಜ್ಜರ್‌ನಿಂದ ಮಹೇಂದರ್ ದಹಿಯಾ, ಅಟೆಲಿಯಿಂದ ಸುನೀಲ್ ರಾವ್, ರೆವಾರಿ ಕ್ಷೇತ್ರದಿಂದ ಸತೀಶ್ ಯಾದವ್ ಮತ್ತು ರಾಜೇಂದ್ರ ರಾವತ್ ಅವರನ್ನು ಹಾಥಿನ್‌ನಿಂದ ಕಣಕ್ಕಿಳಿಸಲಾಗಿದೆ.
2ನೇ ಪಟ್ಟಿಯಲ್ಲಿ ರೀಟಾ ಮಾನಿಯಾ ಅವರನ್ನು ಎಎಪಿ ಸಧೌರಾದಿಂದ ಕಣಕ್ಕಿಳಿಸಿದೆ. ಥಾಣೇಶ್ವರದಿಂದ ಕಿಶನ್ ಬಜಾಜ್, ಇಂದ್ರಿಯಿಂದ ಹವಾ ಸಿಂಗ್ ಸ್ಪರ್ಧಿಸುತ್ತಿದ್ದಾರೆ.
ರಾತಿಯಾದಿಂದ ಮುಕ್ತಿಯಾರ್ ಸಿಂಗ್ ಬಾಜಿಗರ್, ಅದಂಪುರದಿಂದ ಭೂಪೇಂದ್ರ ಬೇನಿವಾಲ್, ಬವಾಲ್‌ನಿಂದ ಜವಾಹರ್ ಲಾಲ್, ಫರಿದಾಬಾದ್‌ನಿಂದ ಪ್ರವೇಶ್ ಮೆಹ್ತಾ ಮತ್ತು ಟಿಗೌನ್‌ನಿಂದ ಅಬಾಶ್ ಚಂಡೇಲಾ ಅವರನ್ನು ಸ್ಪರ್ಧೆಗಿಳಿಸಿದೆ.
90 ವಿಧಾನಸಭಾ ಕ್ಷೇತ್ರಗಳಿರುವ ಹರಿಯಾಣದಲ್ಲಿ ಸೆಪ್ಟೆಂಬರ್ 12ಕ್ಕೆ ನಾಮಪತ್ರ ಸಲ್ಲಿಕೆ ಅವಧಿ ಅಂತ್ಯಗೊಳ್ಳಲಿದೆ. ಅಕ್ಟೋಬರ್ 5ಕ್ಕೆ ಮತದಾನ ನಡೆದು, 8ಕ್ಕೆ ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.