ADVERTISEMENT

ಹರಿಯಾಣ ವಿಧಾನಸಭೆ ಚುನಾವಣೆಗೆ ಸಿದ್ಧತೆ: ಎಎಪಿಯಿಂದ ‘ಬದಲಾವ್ ಜನಸಂವಾದ’

ಪಿಟಿಐ
Published 25 ಜೂನ್ 2024, 15:23 IST
Last Updated 25 ಜೂನ್ 2024, 15:23 IST
ಸಂದೀಪ್‌ ಪಾಠಕ್ (ಬಲದಿಂದ 2ನೆಯವರು)
ಸಂದೀಪ್‌ ಪಾಠಕ್ (ಬಲದಿಂದ 2ನೆಯವರು)   

ಚಂಡೀಗಢ: ವರ್ಷಾಂತ್ಯದ ವೇಳೆಗೆ ಹರಿಯಾಣ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಆಮ್‌ ಆದ್ಮಿ ಪಕ್ಷವು (ಎಎಪಿ) ರಾಜ್ಯದಲ್ಲಿ ಬುಧವಾರದಿಂದ ‘ಬದಲಾವ್ ಜನಸಂವಾದ್’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ. 

ಈ ಕಾರ್ಯಕ್ರಮದ ಅವಧಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ರಾಜ್ಯದ ಪ್ರತಿಯೊಂದು ಗ್ರಾಮಕ್ಕೆ ತೆರಳಿ, ಪ್ರಚಲಿತ ವಿದ್ಯಮಾನಗಳ ಕುರಿತು ಜನರೊಂದಿಗೆ ಸಂವಾದ ನಡೆಸುವರು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹಾಗೂ ರಾಜ್ಯಸಭಾ ಸದಸ್ಯ ಸಂದೀಪ್‌ ಪಾಠಕ್ ಮಂಗಳವಾರ ಹೇಳಿದ್ದಾರೆ.

ಕರ್ನಾಲ್‌ನಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ  ಮಾತನಾಡಿದ ಅವರು, ‘ಜನರಿಗೆ ಉದ್ಯೋಗ ಸಿಕ್ಕಿದೆಯೇ? ರೈತರಿಗೆ ಪ್ರಯೋಜನಗಳು ಲಭಿಸಿವೆಯೇ? ಮುಂದಿನ ಸರ್ಕಾರ ಹೇಗಿರಬೇಕು ಎಂಬ ಬಗ್ಗೆ ಜನರ ನಿರೀಕ್ಷೆಗಳೇನು ಎಂಬುದೂ ಸೇರಿದಂತೆ ವಿವಿಧ ವಿಚಾರಗಳ ಕುರಿತು ಜನರೊಂದಿಗೆ ಸಂವಾದ ನಡೆಸಲಾಗುವುದು’ ಎಂದು ಹೇಳಿದ್ದಾರೆ.

ADVERTISEMENT

‘ನೀವು ಇತರ ಪಕ್ಷಗಳಿಗೆ ಪದೇಪದೇ ಅವಕಾಶಗಳನ್ನು ನೀಡಿದ್ದರೂ, ಆ ಪಕ್ಷಗಳೆಲ್ಲಾ ನಿಮಗೆ ವಂಚಿಸಿವೆ ಎಂಬುದನ್ನು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಜನರಿಗೆ ತಿಳಿಸುವರು. ಈ ಬಾರಿ ಹರಿಯಾಣ ದೊಡ್ಡ ಬದಲಾವಣೆ ನಿರೀಕ್ಷೆಯಲ್ಲಿದೆ ಎಂಬುದನ್ನು ಸಹ ಸಂವಾದದ ವೇಳೆ ಜನರಿಗೆ ಹೇಳುವರು’ ಎಂದು ಪಾಠಕ್‌ ತಿಳಿಸಿದರು.

‘ವಿಧಾನಸಭೆ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿ ಇರುವ ಕಾರಣ ಎಲ್ಲರೂ ಸನ್ನದ್ಧರಾಗಬೇಕು’ ಎಂದು ಪಾಠಕ್‌ ಮತ್ತು ಪಕ್ಷದ ಹರಿಯಾಣ ಘಟಕದ ಅಧ್ಯಕ್ಷ ಸುಶೀಲ್‌ ಗುಪ್ತಾ ಅವರು ಕಾರ್ಯಕರ್ತರಿಗೆ ಸೂಚಿಸಿದರು.

ಗೈರುಹಾಜರು: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಕಾರ್ಯಕರ್ತರ ಸಭೆಗೆ ಹಾಜರಾಗಬೇಕಿತ್ತು. ದೆಹಲಿ ಹೈಕೋರ್ಟ್‌ನಲ್ಲಿ ಅರವಿಂದ ಕೇಜ್ರಿವಾಲ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದ ಕಾರಣ ಅವರು ಸಭೆಗೆ ಹಾಜರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.