ನವದೆಹಲಿ: ಆಮ್ ಆದ್ಮಿ ಪಕ್ಷವು (ಎಎಪಿ) ದಕ್ಷಿಣದ ಅಬಕಾರಿ ಲಾಬಿಯಿಂದ ಕಿಕ್‌ಬ್ಯಾಕ್ ರೂಪದಲ್ಲಿ ಪಡೆದಿದ್ದ ₹100 ಕೋಟಿಯನ್ನು 2022ರ ಗೋವಾ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಖರ್ಚು ಮಾಡಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಆರೋಪಿಸಿದೆ.
ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ. ಸಲ್ಲಿಸಿರುವ ಪೂರಕ ಆರೋಪ ಪಟ್ಟಿಯಲ್ಲಿ ಈ ಆರೋಪ ಮಾಡಲಾಗಿದೆ.
‘ಚಾರಿಯೆಟ್ ಪ್ರೊಡಕ್ಷನ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಅದರ ಮಾಲೀಕ ರಾಜೇಶ್ ಜೋಶಿ ಸೇರಿದಂತೆ ಹಲವರು ₹100 ಕೋಟಿ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ’ ಎಂದೂ ಇ.ಡಿ. ಆರೋಪಿಸಿದೆ.
‘ಬ್ಯಾಂಕ್ ಮೂಲಕ ಮಾತ್ರವಲ್ಲ ಹವಾಲ ಜಾಲದ ಮೂಲಕವೂ ನಗದು ವರ್ಗಾವಣೆಯಾಗಿದೆ. ಇವೆಲ್ಲದರ ಫಲಾನುಭವಿ ಎಎಪಿ’ ಎಂದೂ ಹೇಳಿದೆ.
ಗೋವಾ ಚುನಾವಣೆಯ ಸಂದರ್ಭದಲ್ಲಿ ಎಎಪಿ ಪರವಾಗಿ ಜಾಹೀರಾತು ನೀಡಲು ಹವಾಲ ಜಾಲದ ಮೂಲಕ ₹30 ಕೋಟಿ ವರ್ಗಾವಣೆಯಾಗಿರುವುದು ತನಿಖೆಯಿಂದ ಬಹಿರಂಗಗೊಂಡಿದೆ ಎಂದೂ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಎಎಪಿಯು ಈ ಆರೋಪಗಳನ್ನು ತಳ್ಳಿಹಾಕಿದೆ.
ಹಿಂದಿನ ಆರೋಪಪಟ್ಟಿಗಳಂತೆ ಇದರಲ್ಲಿಯೂ ಎಎಪಿ ಸಂಸದ ರಾಘವ ಛಡ್ಡಾ ಅವರ ಹೆಸರನ್ನು ಇ.ಡಿ. ಉಲ್ಲೇಖಿಸಿದೆ.
ಇ.ಡಿ. ದಾಖಲಿಸಿರುವ ದೂರಿನಲ್ಲಿ ನನ್ನನ್ನು ಆರೋಪಿ ಎಂದು ಹೆಸರಿಸಿರಲಿಲ್ಲ. ಈಗ ನನ್ನ ಘನತೆಗೆ ಚ್ಯುತಿ ತರಲು ಯತ್ನಿಸಲಾಗುತ್ತಿದೆ ಎಂದು ರಾಘವ ಛಡ್ಡಾ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೆಹಲಿಯ ನ್ಯಾಯಾಲಯವು ಈ ಆರೋಪ ಪಟ್ಟಿಯ ಕುರಿತು ಸೋಮವಾರ ವಿಚಾರಣೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.