ನವದೆಹಲಿ: ನನ್ನ ಬಂಧನವಾದರೂ ಸಹ ದೆಹಲಿಯ ಲೋಕಸಭಾ ಕ್ಷೇತ್ರಗಳಲ್ಲಿ ಎಎಪಿ ಜಯ ಸಾಧಿಸಲಿದೆ ಎಂದು ಪಕ್ಷದ ಅಧ್ಯಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ನಾನು ಜೈಲು ಸೇರಿದರೂ ಸಹ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೇ ಎಂಬ ಬಗ್ಗೆ ಮನೆಗೆ ತೆರಳಿ ಅಭಿಪ್ರಾಯ ಸಂಗ್ರಹಿಸುವಂತೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಚಾರವನ್ನು ಹಳಿ ತಪ್ಪಿಸುವ ಉದ್ದೇಶದಿಂದ ನನ್ನ ಬಂಧನಕ್ಕೆ ಬಿಜೆಪಿ ತಂತ್ರ ರೂಪಿಸಿದೆ ಎಂದು ಅವರು ಆರೋಪಿಸಿದ್ದಾರೆ. ಬೇರೆ ಬೇರೆ ಪ್ರಾದೇಶಿಕ ಪಕ್ಷಗಳ ನಾಯಕರನ್ನೂ ಅವರು ಟಾರ್ಗೆಟ್ ಮಾಡಲಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.
ಬಿಜೆಪಿಯ ಸಂಚಿನ ಬಗ್ಗೆ ಜನರಿಗೆ ತಿಳಿಸಿ. ದೆಹಲಿಯ ಒಂದು ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲದಂತೆ ನೋಡಿಕೊಳ್ಳಿ ಎಂದು ಪಕ್ಷದ ಕಾರ್ಯಕರ್ತರಿಗೆ ಅವರು ಕರೆ ನೀಡಿದರು.
ಕಾರ್ಯಕರ್ತರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ‘ನನಗೆ ಸಿಎಂ ಹುದ್ದೆ ಮೇಲೆ ಮೋಹವಿಲ್ಲ. ಅಧಿಕಾರ ಸ್ವೀಕರಿಸಿ 49 ದಿನಗಳಲ್ಲಿ ಯಾರೂ ಕೇಳದಿದ್ದರೂ ರಾಜೀನಾಮೆ ನೀಡಿದ ಜಗತ್ತಿನ ಮೊದಲ ಮುಖ್ಯಮಂತ್ರಿ ನಾನೇ ಆಗಿರಬಹುದು’ಎಂದು ಹೇಳಿದರು.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜಾರಿ ನಿರ್ದೇಶನಾಲಯ ನೀಡಿದ್ದ ನೋಟಿಸ್‌ಗೆ ಸೊಪ್ಪು ಹಾಕದ ಕೇಜ್ರಿವಾಲ್, ಇದು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರು. ಅಲ್ಲದೆ, ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಿದ್ದರು.
‘ಕೌನ್ಸಿಲರ್ ಮತ್ತು ಶಾಸಕರ ಜೊತೆ ನಡೆಸಿದ ಸಭೆಯಲ್ಲಿ ಬಂಧನದ ಬಳಿಕವೂ ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂಬುದು ಅವರ ಅಭಿಪ್ರಾಯವಾಗಿತ್ತು’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.