ನವದೆಹಲಿ: ಈ ಬಾರಿ ಎಎಪಿ ಪಕ್ಷವು ಹೋಳಿ ಹಬ್ಬ ಆಚರಿಸುವುದಿಲ್ಲ. ಅರವಿಂದ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ಮಾರ್ಚ್ 26ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಘೇರಾವ್ ಹಾಕುತ್ತೇವೆ ಎಂದು ದೆಹಲಿ ಸಚಿವವರೂ ಆಗಿರುವ ಪಕ್ಷದ ದೆಹಲಿ ಸಂಚಾಲಕ ಗೋಪಾಲ್ ರೈ ಹೇಳಿದ್ದಾರೆ.
ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಜ್ರಿವಾಲ್ ಕುಟುಂಬದ ಭೇಟಿಗೆ ಬಂದ ಎಎಪಿಯ ಶಾಸಕರು, ಕೌನ್ಸಿಲರ್‌ಗಳನ್ನು ಪೊಲೀಸರು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
‘ಇಡೀ ದಿನ ಕಾರ್ಯಕರ್ತರು ಹಾಗೂ ನಾಯಕರನ್ನು ವಶಕ್ಕೆ ಪಡೆಯಲಾಗಿದೆ. ಇಡೀ ದೇಶ ಕೇಜ್ರಿವಾಲ್ ಅವರ ಬಂಧನಕ್ಕೆ ಆಕ್ರೋಶ ಹಾಗೂ ದುಃಖ ವ್ಯಕ್ತಪಡಿಸಿದೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಎಎಪಿಯ ಎಲ್ಲಾ ಶಾಸಕರು, ಕೌನ್ಸಿಲರ್‌ಗಳು, ಸಿಬ್ಬಂದಿಗಳು, ಇಂಡಿಯಾ ಮೈತ್ರಿಕೂಟದ ಪ್ರತಿನಿಧಿಗಳು ಪ್ರಜಾಪ್ರಭುತ್ವ ಉಳಿಸುವ ಪ್ರತಿಜ್ಞೆ ಮಾಡಲಿದ್ದೇವೆ. ಭಗತ್‌ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮ ದಿನವಾದ ಶನಿವಾರದಂದು ಶಹೀದಿ ಪಾರ್ಕ್‌ನಲ್ಲಿ ನಾವು ಸಮಾವೇಶಗೊಳ್ಳಲಿದ್ದೇವೆ. ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ರೈ ಹೇಳಿದ್ದಾರೆ.
‘ಮಾರ್ಚ್ 24ರಂದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಲಾಗುವುದು. ಮಾರ್ಚ್ 25ರ ಹೋಳಿ ಹಬ್ಬದ ದಿನದಂದು ಯಾವುದೇ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳುವುದಿಲ್ಲ. ಮಾರ್ಚ್ 26ರಂದು ಪ್ರಧಾನಿ ನಿವಾಸಕ್ಕೆ ಘೇರಾವ್ ಹಾಕಲಿದ್ದೇವೆ’ ಎಂದು ತಿಳಿಸಿದ್ದಾರೆ.
ಇಂಡಿಯಾ ಮೈತ್ರಿ ಪಕ್ಷಗಳೊಂದಿಗೆ ಮಾತುಕತೆ ನಡೆಸಿ ಕೇಜ್ರಿವಾಲ್ ಬಂಧನದ ವಿರುದ್ಧ ಜಂಟಿ ಸಮರದ ಬಗ್ಗೆ ಶೀಘ್ರವೇ ಘೋಷಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.