ಮುಂಬೈ: ಮೆಟ್ರೊ–3ನೇ ಹಂತದ ಕಾಮಗಾರಿಗೆ ಬಲಿಯಾಗಲಿರುವ 2,656ಮರಗಳನ್ನು ರಕ್ಷಿಸಲು ಆರೆ ಕಾಲೊನಿ ನಿವಾಸಿಗರು ಪಣ ತೊಟ್ಟಿದ್ದು, ಶನಿವಾರ ಭಾರಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿ ಮತ್ತು ರೈಲು ನಿಗಮದ ಅಧಿಕಾರಿಗಳಿಗೆ ಥಳಿಸಿಕರ್ತವ್ಯಕ್ಕೆ ಅಡ್ಡಿಪಡಿಸಿದ ಆಧಾರ ಮೇಲೆ 29 ಮಂದಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಮೆಟ್ರೊ ರೈಲು ನಿಗಮದ (ಎಂಎಂಆರ್‌ಸಿಎಲ್) ಉದ್ದೇಶಿತ ಮೆಟ್ರೊ–3ನೇ ಹಂತದ ಕಾರ್ ಶೆಡ್ ನಿರ್ಮಾಣ ಕಾಮಗಾರಿ ವಿರೋಧಿಸಿ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗಿತ್ತು. ಶುಕ್ರವಾರ ಹೈಕೋರ್ಟ್ ಎಲ್ಲ ನಾಲ್ಕು ಅರ್ಜಿಗಳನ್ನು ವಜಾ ಮಾಡಿತ್ತು.
ತೀರ್ಪು ಹೊರಬಂದ ಒಂದು ಗಂಟೆಯೊಳಗೆ ರೈಲು ನಿಗಮ ಬೋಗಿಗಳ ಶೆಡ್ ನಿರ್ಮಾಣಕ್ಕೆ ಮರಗಳನ್ನು ಕಡಿಯಲು ಮುಂದಾಗಿತ್ತು. ಶುಕ್ರವಾರ ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಕಾಲೊನಿ ನಿವಾಸಿಗರು, ಹಲವು ಎನ್‌ಜಿಒಗಳ ಕಾರ್ಯಕರ್ತರು, ಪರಿಸರವಾದಿಗಳು ಭಾರಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾ ನಿರತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಹೊಯ್–ಕೈ ನಡೆದಿದೆ. ಪೊಲೀಸರು ಸೆಕ್ಷನ್ 144 ಜಾರಿ ಮಾಡಿದ್ದು, ಕರ್ಫ್ಯೂ ಹೇರಲಾಗಿದೆ.
ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬಾಲಿವುಡ್ ತಾರೆಯರು ಧನಿಗೂಡಿಸಿದ್ದಾರೆ.ಆರೆ ಕಾಲೊನಿಯಲ್ಲಿರುವ ಮರಗಳ ಸಮೂಹ ಮುಂಬೈ ನಗರಕ್ಕೆಉತ್ತಮ ಗಾಳಿಯನ್ನು ಒದಗಿಸುತ್ತಿದೆ. ಅತಿ ಹೆಚ್ಚು ಹಸಿರು ಹೊದಿಕೆ ಇರುವ ಮುಂಬೈನ ಪ್ರಮುಖ ಪ್ರದೇಶವಾಗಿದ್ದು, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.