ADVERTISEMENT

‘ಆತ್ಮನಿರ್ಭರತಾ’; 2020ನೇ ಸಾಲಿನ ಹಿಂದಿ ಪದ

’ಆಕ್ಸ್‌ಫರ್ಡ್‌ ಲ್ಯಾಂಗ್ವೇಜಸ್‌‘ನಿಂದ ನಾಮನಿರ್ದೇಶನ

ಪಿಟಿಐ
Published 2 ಫೆಬ್ರುವರಿ 2021, 7:08 IST
Last Updated 2 ಫೆಬ್ರುವರಿ 2021, 7:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಆತ್ಮನಿರ್ಭರತಾ’ (ಸ್ವಾವಲಂಬನೆ) ಶಬ್ದವನ್ನು 2020ನೇ ಸಾಲಿನ ‘ಹಿಂದಿ ಪದ’ ಎಂಬುದಾಗಿ ‘ಆಕ್ಸ್‌ಫರ್ಡ್‌ ಲ್ಯಾಂಗ್ವೇಜಸ್‌’ ಘೋಷಿಸಿದೆ.

ಕೋವಿಡ್‌ ಪಿಡುಗಿನ ವಿರುದ್ಧ ಕೋಟ್ಯಂತರ ಭಾರತೀಯರು ನಿತ್ಯವೂ ಹೋರಾಡಿ, ಜಯ ಸಾಧಿಸಿ, ಈ ಶಬ್ದವನ್ನು ಜನಮಾನಸದಲ್ಲಿ ಕಾಯಂ ಆಗುವಂತೆ ಮಾಡಿದ್ದಾರೆ ಎಂದು ‘ಆಕ್ಸ್‌ಫರ್ಡ್‌ ಲ್ಯಾಂಗ್ವೇಜಸ್‌’ ಹೇಳಿದೆ.

‘ಆಕ್ಸ್‌ಫರ್ಡ್‌ ಲ್ಯಾಂಗ್ವೇಜಸ್‌’ ವಿಶ್ವದ ವಿವಿಧ ಭಾಷೆಗಳ ಕುರಿತ ಮಾಹಿತಿಯನ್ನು ಸಂಗ್ರಹಿಸಿ, ಪ್ರಚುರಪಡಿಸುವ ಸಂಸ್ಥೆ. ಭಾಷಾತಜ್ಞರಾದ ಕೃತ್ತಿಕಾ ಅಗರ್‌ವಾಲ್‌, ಪೂನಂ ನಿಗಮ್‌ ಸಹಾಯ್‌ ಹಾಗೂ ಇಮೋಜೆನ್‌ ಫಾಕ್ಸ್‌ವೆಲ್‌ ಅವರನ್ನೊಳಗೊಂಡ ಸಲಹಾ ಸಮಿತಿ ಈ ಪದವನ್ನು ಆಯ್ಕೆ ಮಾಡಿದೆ.

ADVERTISEMENT

‘ಕೋವಿಡ್‌–19 ವ್ಯಾಪಕವಾಗುತ್ತಿರುವ ಆರಂಭಿಕ ದಿನಗಳಲ್ಲಿ, ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಪ್ಯಾಕೇಜ್‌ ಘೋಷಿಸಿದರು. ವೈಯಕ್ತಿಕವಾಗಿ, ಸಾಮಾಜಿಕ ಹಾಗೂ ಒಂದು ರಾಷ್ಟ್ರವಾಗಿ ಸ್ವಾವಲಂಬನೆ ಸಾಧಿಸುವುದನ್ನು ಅವರು ಪ್ರತಿಪಾದಿಸಿದರು. ಅದನ್ನು ವಿವರಿಸಲು ಅವರು ‘ಆತ್ಮನಿರ್ಭರತಾ’ ಪದವನ್ನು ಬಳಸಿದರು’ ಎಂದು ಆಕ್ಸ್‌ಫರ್ಡ್‌ ಲ್ಯಾಂಗ್ವೇಜಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದಿನ ವರ್ಷಗಳಲ್ಲಿ ಆಧಾರ್‌ (2017), ನಾರಿಶಕ್ತಿ (2018) ಹಾಗೂ ಸಂವಿಧಾನ (2019) ಪದಗಳನ್ನು ಈ ಸಂಸ್ಥೆ ವರ್ಷದ ಹಿಂದಿ ಪದಗಳು ಎಂದು ಗುರುತಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.