ನವದೆಹಲಿ: ಬ್ರಿಟನ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷ ಭರ್ಜರಿ ಜಯ ಸಾಧಿಸಿದ ಬಳಿಕ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಅಬ್ ಕಿ ಬಾರ್ 400 ಪಾರ್’ ಎಂಬುದು ಅಂತಮವಾಗಿ ಮತ್ತೊಂದು ದೇಶದಲ್ಲಿ ನಡೆದಿದೆ ಎಂದು ಹೇಳಿದ್ದಾರೆ.
ಬ್ರಿಟನ್ ಚುನಾವಣೆ ಫಲಿತಾಂಶದೊಂದಿಗೆ ಭಾರತದ ಲೋಕಸಭೆ ಚುನಾವಣೆ ಫಲಿತಾಂಶವನ್ನು ಹೋಲಿಕೆ ಮಾಡಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಅಬ್ ಕಿ ಬಾರ್ 400 ಪಾರ್’ ನಡೆದಿದೆ. ಆದರೆ ಭಾರತದಲ್ಲಿ ಅಲ್ಲ. ಬೇರೆ ದೇಶದಲ್ಲಿ’ ಎಂದು ಬರೆದುಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು 400 ಸ್ಥಾನಗಳನ್ನೂ ದಾಟಲಿದೆ ಎಂದು ಬಿಜೆಪಿ ನಾಯಕರು ಭವಿಷ್ಯ ನುಡಿದಿದ್ದರು. ಆದರೆ, ಫಲಿತಾಂಶ ಬಂದಾಗ ಬಿಜೆಪಿ 240 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, ಎನ್‌ಡಿಎ ಮೈತ್ರಿಕೂಟ 293 ಸ್ಥಾನಗಳಿನ್ನು ಪಡೆಯುವಲ್ಲಿ ಯಶಸ್ವಿಯಾಯಿತು.
ಇತ್ತ ‘ಇಂಡಿಯಾ’ ಮೈತ್ರಿಕೂಟದಲ್ಲಿ 236 ಸಂಸದರಿದ್ದಾರೆ. ಉಳಿದಂತೆ ಆರು ಪಕ್ಷಗಳಿಗೆ ಸೇರಿದ 9 ಸಂಸದರು ಯಾವ ಕೂಟಕ್ಕೂ ಸೇರಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗಳಿಸಿದರೆ, ‘ಇಂಡಿಯಾ’ ಬಣ 234 ಸ್ಥಾನಗಳನ್ನು ಪಡೆದುಕೊಂಡಿದೆ. ಇಬ್ಬರು ಪಕ್ಷೇತರ ಸಂಸದರು ಕಾಂಗ್ರೆಸ್‌ಗೆ ಬೆಂಬಲವನ್ನು ನೀಡಿದ್ದರಿಂದ ‘ಇಂಡಿಯಾ’ ಬಣದ ಸಂಖ್ಯೆ 236ಕ್ಕೇರಿದೆ.
ಬ್ರಿಟನ್ ಸಂಸತ್ತಿಗೆ (ಹೌಸ್ ಆಫ್ ಕಾಮನ್ಸ್) ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷವು ಭಾರಿ ಬಹುಮತ ಗಳಿಸಿದ್ದು, ಕೀರ್ ಸ್ಟಾರ್ಮರ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಸಂಸತ್ತಿನ 650 ಸ್ಥಾನಗಳಿಗೆ ಗುರುವಾರ ಮತದಾನ ನಡೆದು, ಶುಕ್ರವಾರ ಫಲಿತಾಂಶ ಹೊರಬಿದ್ದಿದೆ. ತಮ್ಮ ಪಕ್ಷವು ಸ್ಪಷ್ಟ ಬಹುಮತ (412) ಪಡೆಯುತ್ತಿದ್ದಂತೆಯೇ 61 ವರ್ಷದ ಸ್ಟಾರ್ಮರ್ ಅವರು ಲಂಡನ್‌ನಲ್ಲಿ ಬೆಂಬಲಿಗರೊಂದಿಗೆ ಸಂಭ್ರಮಿಸಿದ್ದಾರೆ. 2019ರ ಚುನಾವಣೆಯಲ್ಲಿ ಲೇಬರ್ ಪಕ್ಷ 211 ಸ್ಥಾನಗಳನ್ನು ಪಡೆದಿತ್ತು.
ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಾರ್ಟಿಗೆ ತನ್ನ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಎದುರಾಗಿದೆ. ಈ ಬಾರಿ ಕನ್ಸರ್ವೇಟಿವ್ ಪಾರ್ಟಿ 121 ಸ್ಥಾನಗಳನ್ನು ಪಡೆದಿದೆ.
ಲೇಬರ್ ಪಕ್ಷ ಶೇ 33.7 ರಷ್ಟು ಮತಗಳನ್ನು ಪಡೆದರೆ, ಕನ್ಸರ್ವೇಟಿವ್ ಪಾರ್ಟಿಗೆ ಶೇ 23.7ರಷ್ಟು ಮತಗಳು ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.