ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಐಷಾರಾಮಿ ನಿವಾಸದ ಸಮೀಪದಲ್ಲಿಪತ್ತೆಯಾಗಿದ್ದ ಸ್ಫೋಟಕಗಳನ್ನು ತುಂಬಿದ್ದ ಎಸ್‌ಯುವಿ ಕಾರಿನ ರಹಸ್ಯ ಬಯಲಾಗಿದೆ. ಆಕಾರು ಕೆಲವು ದಿನಗಳ ಹಿಂದೆಯಷ್ಟೇ ಕಳವಾಗಿತ್ತು ಎಂಬ ಮಾಹಿತಿಯು ಪೊಲೀಸರಿಗೆ ಲಭ್ಯವಾಗಿದೆ.
ಅಲ್ಲದೆ ಕಾರಿನಲ್ಲಿ ಪತ್ತೆಯಾಗಿರುವ ಜಿಲೆಟಿನ್ ಕಡ್ಡಿಗಳನ್ನು ನಾಗ್ಪುರ ಘಟಕದಲ್ಲಿ ತಯಾರಿಸಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಕ್ರೈಮ್ ಇಂಟೆಲಿಜೆನ್ಸ್ ವಿಭಾಗವು ಸ್ಕಾರ್ಪಿಯೊ ಕಾರಿನ ಮಾಲಿಕರನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆಯಲ್ಲಿ ಕಾರು ಕಳವಾಗಿದ್ದ ವಿಚಾರ ಬಯಲಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ 20ರಷ್ಟು ಜಿಲೆಟಿನ್ ಕಡ್ಡಿಗಳನ್ನು ನಾಗ್ಪುರ ಮೂಲದಸೋಲರ್ ಇಂಡಿಸ್ಟ್ರೀಸ್ ನಿರ್ಮಿಸಲಾಗಿದ್ದು, ಕಂಪನಿಯನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.
ಏತನ್ಮಧ್ಯೆ ಆರೋಪಿಗಳ ಪತ್ತೆಗಾಗಿ ಪೊಲೀಸರು ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. ಕಾರ್ಮೈಕಲ್ ರಸ್ತೆ ಬಳಿಯಲ್ಲಿ ಗುರುವಾರ ಪತ್ತೆಯಾಗಿದ್ದ ಸ್ಫೋಟಕ ತುಂಬಿದ ವಾಹನವನ್ನು ಜಪ್ತಿ ಮಾಡಿರುವ ಪೊಲೀಸರು ಅಪರಿಚಿತ ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಕ್ರೈಮ್ ಬ್ರ್ಯಾಂಚ್ ವಿಭಾಗ ಸಹ ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಮುಂಬೈ ಪೊಲೀಸ್ ಆಯುಕ್ತ (ಕಾರ್ಯಾಚರಣೆ ವಿಭಾಗ) ಎಸ್. ಚೈತನ್ಯ ಮಾಹಿತಿ ನೀಡಿದ್ದಾರೆ.
ಈ ನಡುವೆ ಮುಖೇಶ್ ಹಾಗೂ ನೀತಾ ಅಂಬಾನಿಗೆ ಬೆದರಿಕೆಯೊಡ್ಡಿರುವ ಪತ್ರವನ್ನು ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವ ಪೊಲೀಸರು, ಪತ್ರದಲ್ಲಿ ಅಕ್ಷರ ಹಾಗೂ ವ್ಯಾಕರಣ ದೋಷ ಕಂಡುಬಂದಿದೆ ಎಂದು ಹೇಳಿದರು.
ಸಿಸಿಟಿವಿ ದೃಶ್ಯಗಳನ್ನು ಸಹ ಸಂಗ್ರಹಿಸಿ ಮುಂಬೈ ಪೊಲೀಸ್ ಪರಿಶೀಲಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.