ADVERTISEMENT

ಅಂಬಾನಿ ನಿವಾಸದ ಬಳಿ ಶಂಕಿತ ಸ್ಫೋಟಕ ಸಹಿತ ಎಸ್‌ಯುವಿ ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2021, 16:10 IST
Last Updated 25 ಫೆಬ್ರುವರಿ 2021, 16:10 IST
ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ   

ಮುಂಬೈ: ಜಗತ್ತಿನ ಅತಿ ಶ್ರೀಮಂತ ಉದ್ಯಮ ದಿಗ್ಗಜರಲ್ಲಿ ಓರ್ವರಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ನಿವಾಸದ ಸಮೀಪದಲ್ಲಿ ಶಂಕಿತ ಜಿಲೆಟಿನ್ ಸ್ಫೋಟಕಗಳಿದ್ದ ಎಸ್‌ಯುವಿ ಕಾರೊಂದು ಪತ್ತೆಯಾಗಿದೆ.

ಗುರುವಾರ ಸಂಜೆಯ ವೇಳೆಗೆ ಕಾರ್ಮೈಕಲ್ ರಸ್ತೆಯಲ್ಲಿ ಶಂಕಿತ ಜಿಲೆಟಿನ್ ಸ್ಫೋಟಕಗಳಿದ್ದ ಸ್ಕಾರ್ಪಿಯೊ ಕಾರು ಪತ್ತೆಯಾಗಿದೆ. ಅಂತಿಲಿಯಾದ ಮರದ ಬಳಿ ಕಾರನ್ನು ಇರಿಸಲಾಗಿದೆ. ಬುಧವಾರ ಸಂಜೆಯಿಂದ ಕಾರು ಇದೇ ಜಾಗದಲ್ಲಿ ನಿಲ್ಲಿಸಲಾಗಿದೆ ಎಂದು ಶಂಕಿಸಲಾಗಿದೆ.

ಕಾರಿನಲ್ಲಿ ಶಂಕಿತ ವಸ್ತುಗಳು ಕಂಡುಬಂದಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಸುತ್ತು ಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ADVERTISEMENT

ಘಟನೆಯನ್ನು ಗಂಭೀರತೆಯನ್ನು ಅರಿತುಕೊಂಡು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್, ಪೊಲೀಸ್ ಮಹಾನಿರ್ದೇಶಕ ಹೇಮಂತ್ ನಾಗ್ರೇಲ್, ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಖುದ್ದಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

20ರಷ್ಟು ಶಂಕಿತ ಜಿಲೆಟಿನ್ಕಡ್ಡಿಗಳು ಸ್ಕಾರ್ಪಿಯೊ ಕಾರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ದೇಶಮುಖ್ ವಿವರಣೆ ನೀಡಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕಾರನ್ನು ತಪಾಸಣೆ ಮಾಡಲಾಗುತ್ತಿದೆ. ತನಿಖೆ ಪೂರ್ಣಗೊಳ್ಳುವ ವರೆಗೂ ಕಾಯೋಣ ಎಂದು ಗೃಹ ಇಲಾಖೆಯ ರಾಜ್ಯ ಸಚಿವ ಶಂಭುರಾಜ್ ದೇಸಾಯಿ ತಿಳಿಸಿದರು.

ಮುಂಬೈ ಪೊಲೀಸ್, ಕ್ರೈಮ್ ಬ್ರ್ಯಾಂಚ್, ಬಾಂಬ್ ಡಿಟೆಕ್ಷನ್ ಆ್ಯಂಡ್ ಡಿಸ್ಪಾಸಲ್ ಸ್ಕ್ವಾಡ್ ಮತ್ತು ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

ಎಸ್‌ಯುವಿ ನಂಬರ್ ಪ್ಲೇಟ್ ಅಂಬಾನಿ ಕುಟುಂಬದಲ್ಲಿರುವ ಕಾರಿಗೆ ಹೋಲುತ್ತದೆ ಎಂದು ಹೇಳಲಾಗಿದೆ. ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.