ADVERTISEMENT

ಶಿಂಜೊ ಅಬೆ ಅವರನ್ನು ಬದುಕಿಸಬಹುದಿತ್ತು: ವಿಡಿಯೊ ಹಂಚಿಕೊಂಡು ಆನಂದ್ ಮಹೀಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜುಲೈ 2022, 10:40 IST
Last Updated 10 ಜುಲೈ 2022, 10:40 IST
ಶಿಂಜೊ ಅಬೆ ಅವರ ಮೇಲೆ ದಾಳಿ ನಡೆಯುತ್ತಿರುವ ಸನ್ನಿವೇಶ
ಶಿಂಜೊ ಅಬೆ ಅವರ ಮೇಲೆ ದಾಳಿ ನಡೆಯುತ್ತಿರುವ ಸನ್ನಿವೇಶ    

ನವದೆಹಲಿ: ‘ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರನ್ನು ಗುಂಡೇಟಿನಿಂದ ಪಾರು ಮಾಡಬಹುದಾಗಿತ್ತು. ಅವರನ್ನು ಉಳಿಸಿಕೊಳ್ಳಬಹುದಾಗಿತ್ತು’ ಎಂದು ಉದ್ಯಮಿ ಆನಂದ್‌ ಮಹೀಂದ್ರ ಅವರು ಟ್ವಿಟರ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಶಿಂಜೊ ಅಬೆ ಅವರ ಮೇಲೆ ದಾಳಿ ನಡೆಯುತ್ತಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು ಭದ್ರತಾ ವೈಫಲ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಮೊದಲ ಗುಂಡೇಟು ತಪ್ಪಿಹೋಯಿತು. ಎರಡನೇ ಗುಂಡು ಹಾರುವುದಕ್ಕೆ ಸಮಯವಿತ್ತು. ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸುತ್ತಿದ್ದವನನ್ನು ಹಿಂಬಾಲಿಸುವ ಬದಲಿಗೆ ಅಬೆ ಅವರ ಮೇಲೆ ಹಾರಿ, ಅವರಿಗೆ ರಕ್ಷಣೆ ನೀಡಿ, ಗುಂಡೇಟು ಬೀಳುವುದನ್ನು ತಪ್ಪಿಸಬಹುದಿತ್ತಲ್ಲವೇ? ಭದ್ರತಾ ಸಿಬ್ಬಂದಿಯು ಅಬೆ ಅವರನ್ನು ಬದುಕಿಸಬಹುದಿತ್ತು. ಅವರು ಬದುಕಬೇಕಿತ್ತು’ ಎಂದು ಮಹೀಂದ್ರಾ ಹೇಳಿದ್ದಾರೆ.

ADVERTISEMENT

ಆನಂದ್‌ ಮಹೀಂದ್ರ ಆವರ ಅಭಿಪ್ರಾಯಕ್ಕೆ ಭಾರತದ ನಿವೃತ್ತ ಐಪಿಎಸ್‌ ಅಧಿಕಾರಿ ಮುಕ್ತೇಶ್‌ ಚಂದರ್‌ ಸಹಮತ ವ್ಯಕ್ತಪಡಿಸಿದ್ದಾರೆ.

ಮಹೀಂದ್ರ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅವರು, ‘ನಾನು ಐವರು ಪ್ರಧಾನಿಗಳು ಮತ್ತು ಮಾಜಿ ಪ್ರಧಾನಿಗಳಿಗೆ ದೆಹಲಿಯ ಎಲ್ಲಾ ಹೊರಾಂಗಣ ಕಾರ್ಯಕ್ರಮಗಳ ಭದ್ರತೆಯ ಉಸ್ತುವಾರಿ ವಹಿಸಿದ್ದೇನೆ. ದೆಹಲಿ ಪೊಲೀಸರ ವಿವಿಐಪಿ ಭದ್ರತಾ ಘಟಕದಲ್ಲಿದ್ದ ನನ್ನ ಅನುಭವದ ಆಧಾರದಲ್ಲಿ ಹೇಳುವುದಾದರೆ ಆನಂದ್‌ ಮಹೀಂದ್ರ ಅವರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ. ಭದ್ರತೆಯಲ್ಲಿ ಹಲವು ಲೋಪಗಳಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ’ ಎಂದು ಅವರು ಹೇಳಿದ್ದಾರೆ.

ಜಪಾನ್‌ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಶಿಂಜೊ ಅಬೆ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.