ಅಹಮದಾಬಾದ್: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ವಿದ್ಯಾರ್ಥಿಯಾಗಿದ್ದಾಗ ತಿಹಾರ್ ಜೈಲಿನಲ್ಲಿ 10 ದಿನ ಕಳೆದಿದ್ದನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದಾರೆ.
ಗುಜರಾತ್ ಅಹಮದಾಬಾದ್ ವಿಶ್ವವಿದ್ಯಾಲಯದ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳ ಜೊತೆ ಅಭಿಜಿತ್ ಬ್ಯಾನರ್ಜಿ ಅವರು ಸಂವಾದ ನಡೆಸಿದರು.
'ಜೆಎನ್‌ಯು ಕಾಲೇಜಿನ ಕೊನೆಯ ದಿನಗಳು. ಹಾರ್ವರ್ಡ್‌ಗೆ ಹೋಗುವ ಯೋಚನೆಯಲ್ಲಿದ್ದೆ. ಆಗ ವಿದ್ಯಾರ್ಥಿ ಚಳವಳಿಯಲ್ಲಿ ಪಾಲ್ಗೊಂಡಿದ್ದೆ. ಆಗ ನನ್ನನ್ನು ತಿಹಾರ್ ಜೈಲಿಗೆ ಕರೆದೊಯ್ಯಲಾಯಿತು. ಅಲ್ಲಿ 10 ದಿನಗಳ ವರೆಗೆ ಇರಿಸಿದ್ದರು. ನಾನು ಜೈಲಿನಿಂದ ಹೊರಗೆ ಬಂದಾಗ ಭವಿಷ್ಯವನ್ನು ಹಾಳು ಮಾಡಿಕೊಂಡಿದ್ದಾಗಿ ಹಲವಾರು ಹಿರಿಯರು ಹೇಳಿದರು. ಹಾರ್ವರ್ಡ್ ಅಥವಾ ಅಮೆರಿಕದಲ್ಲಿ ಪ್ರವೇಶಕ್ಕೆ ಅವಕಾಶ ದೊರೆಯದು ಎಂದಿದ್ದರು. ಅವರ ಪ್ರಕಾರ ನಾನು ಜೈಲು ಸೇರಿದ್ದಕ್ಕೆ ಪಶ್ಚಾತ್ತಾಪ ಪಡಬೇಕಿತ್ತು' ಎಂದು ಅಭಿಜಿತ್ ಬ್ಯಾನರ್ಜಿ ತಮ್ಮ ಹಳೆಯ ನೆನಪುಗಳನ್ನು ಸ್ಮರಿಸಿದರು.
ಇದೇ ಸಂದರ್ಭ, ಬ್ಯಾನರ್ಜಿ ಅವರು ಭಾರತದ ಇಬ್ಬರು ಸಿನಿಮಾ ನಿರ್ಮಾಪಕರಾದ ಸತ್ಯಜಿತ್ ರೇ ಮತ್ತು ಶ್ಯಾಮ್ ಬೆನೆಗಲ್ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿದರು. ಇವರಿಬ್ಬರು ಅರ್ಥಶಾಸ್ತ್ರದ ಪದವೀದರರು. ಆದರೆ ಅವರು ವಿಭಿನ್ನ ಹಾದಿ ತುಳಿದರು. ಹಾಗಿದ್ದೂ ಅವರು ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆ ಏರಿದರು. ಹಾಗಾಗಿ ಯಾವುದೋ ಒಂದು ನಿರ್ದಿಷ್ಟ ತರಬೇತಿ ಪಡೆಯುವುದಕ್ಕಿಂತ ಮುಖ್ಯವಾಗಿ ಚುರುಕಿನಿಂದ ಇರುವುದು, ವಿಚಾರಶೀಲರಾಗಿರುವುದು ಮತ್ತು ಮಾನವೀಯತೆ ಅಳವಡಿಸಿಕೊಳ್ಳುವುದು ಪ್ರಮುಖವಾಗಿದೆ. ಅದೇ ಜೀವನದ ಪ್ರಮುಖ ಭಾಗ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.