ADVERTISEMENT

ವಿಂಗ್ ಕಮಾಂಡರ್ ಅಭಿನಂದನ್‍ ಬೆನ್ನೆಲುಬು, ಪಕ್ಕೆಲುಬಿನಲ್ಲಿ ಗಾಯ ಪತ್ತೆ

ಏಜೆನ್ಸೀಸ್
Published 3 ಮಾರ್ಚ್ 2019, 16:53 IST
Last Updated 3 ಮಾರ್ಚ್ 2019, 16:53 IST
   

ನವದೆಹಲಿ:ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ದೇಹವನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಲಾಗಿದೆ. ಅವರ ದೇಹದಲ್ಲಿ ಯಾವುದೇ ಜಾಡುಪತ್ತೆ ಚಿಪ್ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

58 ಗಂಟೆ ಪಾಕಿಸ್ತಾನ ಸೇನೆಯ ವಶದಲ್ಲಿದ್ದ ಅಭಿನಂದನ್ ಅವರ ದೇಹಕ್ಕೆ ಜಾಡುಪತ್ತೆ ಚಿಪ್‌ ಅಳವಡಿಸಿರುವ ಮತ್ತು ಸೋಂಕು ಸೇರಿಸಿರುವ ಅಪಾಯದ ಬಗ್ಗೆ ಭದ್ರತಾ ತಜ್ಞರು ಶಂಕೆ ವ್ಯಕ್ತಪಡಿಸಿದ್ದರು. ಆದರೆ ವೈದ್ಯರು ಈ ಸಾಧ್ಯತೆಗಳನ್ನು ಅಲ್ಲಗೆಳೆದಿದ್ದಾರೆ. ‘ಅಭಿನಂದನ್ ಅವರ ದೇಹದಲ್ಲಿ ಇವೆರಡೂ ಪತ್ತೆಯಾಗಿಲ್ಲ’ ಎಂದು ವೈದ್ಯರು ಹೇಳಿದ್ದಾರೆ.

‘ಆದರೆ ಅವರ ಬೆನ್ನುಹುರಿ ಮುರಿತ ಪತ್ತೆಯಾಗಿದೆ. ವಿಮಾನದಿಂದ ‘ಇಜೆಕ್ಟ್‌’ ಆದ ಕಾರಣ ಈ ಮುರಿತ ಸಂಭವಿಸಿರಬಹುದು. ಆ ಮುರಿತದ ದೀರ್ಘಾವಧಿ ಪರಿಣಾಮಗಳ ಬಗ್ಗೆ ಇನ್ನಷ್ಟೇ ವಿಶ್ಲೇಷಣೆ ನಡೆಯಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಅಭಿನಂದನ್ ಅವರ ಪಕ್ಕೆಯ ಎಲುಬೊಂದು ಮುರಿದಿದೆ. ಪ್ಯಾರಾಚೂಟ್‌ನಿಂದ ನೆಲಕ್ಕೆ ಇಳಿದ ನಂತರ ಅವರ ಮೇಲೆ ನಡೆದಿದ್ದ ಹಲ್ಲೆಯಿಂದ ಈ ಮುರಿತ ಸಂಭವಿಸಿರಬಹುದು’ ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಸೇನೆಯ ವಶದಲ್ಲಿದ್ದ ಅವರ ಮನಸ್ಥಿತಿ ಹಾಗೂ ದೇಹದ ಆರೋಗ್ಯವನ್ನು ಸಮಸ್ಥಿತಿಗೆ ತರುವ ಸಲುವಾಗಿ ಕೆಲವು ಸರಳ ವ್ಯಾಯಾಮ ಪ್ರಕ್ರಿಯೆಗಳಿಗೆ (ಕೂಲಿಂಗ್ ಡೌನ್ ಪ್ರೊಸೆಸ್) ಒಳಪಡಿಸಲಾಗಿದೆ. ಇನ್ನೂ ಕೆಲವು ದಿನ ಈ ಪ್ರಕ್ರಿಯೆ ಮುಂದುವರಿಯಲಿದೆ. ಅಭಿನಂದನ್ ಅವರಿಂದ ಮಾಹಿತಿ ಕಲೆಹಾಕುವ ಮತ್ತು ಅವರ ಮನೋಸ್ಥೈರ್ಯ ಹೆಚ್ಚಿಸುವ ಪ್ರಕ್ರಿಯೆಯನ್ನು ವಿವಿಧ ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಆರಂಭಿಸಿದ್ದಾರೆ. ಇನ್ನೂ ಕೆಲವು ದಿನ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಮೂಲಗಳು ಹೇಳಿವೆ.

ಶೀಘ್ರ ಯುದ್ಧವಿಮಾನ ಏರುವ ಬಯಕೆ

‘ಅಭಿನಂದನ್ ಅವರು ಶೀಘ್ರವೇ ಯುದ್ಧವಿಮಾನ ಏರಲು ಕಾತರರಾಗಿದ್ದಾರೆ. ಇದು ನೆರವೇರಬೇಕು ಎಂದು ನಾವೂ ಬಯಸುತ್ತೇವೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಾವೂ ಮಾಡುತ್ತಿದ್ದೇವೆ’ ಎಂದು ಸೇನಾ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

‘ಬೆನ್ನುಹುರಿಗೆ ಹಾನಿಯಾಗಿರುವ ಕಾರಣ ಅವರು ಮತ್ತೆ ಯುದ್ಧವಿಮಾನ ಚಲಾಯಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಬೇಕಿದೆ’ ಎಂದು ಅವರು ವಿವರಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.