ಚೆನ್ನೈ:ವಿಂಗ್ ಕಮಾಂಡರ್ ವಿ.ಅಭಿನಂದನ್ ಅವರ ಕುಟುಂಬದ ಮೂರು ತಲೆಮಾರು ಭಾರತೀಯ ಸೇನೆಗಾಗಿ ದುಡಿದಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ತಿರುಪಣಾಮೂರ್ ಗ್ರಾಮದ ಈ ಕುಟುಂಬದ ನಾಲ್ವರು ಭಾರತೀಯ ಸೇನೆಯ ವಿವಿಧ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಭಿನಂದನ್ ಅವರ ತಂದೆ ಎಸ್.ವರ್ಧಮಾನ್ ಅವರು ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ನಿವೃತ್ತರಾಗುವ ಮುನ್ನ ಏರ್ ಮಾರ್ಷಲ್ ಆಗಿದ್ದರು. ಐದನೇ ತಲೆಮಾರಿನ ಯುದ್ಧವಿಮಾನಗಳ ಸಾಮರ್ಥ್ಯ ಪರಿಶೀಲನಾ ತಾಂತ್ರಿಕ ಸಮಿತಿಯ ಸದಸ್ಯರಾಗಿ ಅವರು ಕೆಲಸ ಮಾಡಿದ್ದಾರೆ.
ಎಸ್. ವರ್ಧಮಾನ್ ಅವರು ತಮ್ಮ ಪತ್ನಿಯೊಂದಿಗೆ ಚೆನ್ನೈ ಹೊರವಲಯದ ಬಡಾವಣೆಯೊಂದರಲ್ಲಿ ವಾಸವಾಗಿದ್ದಾರೆ. ವಾಯುಪಡೆಯ ನಿವೃತ್ತ ಸಿಬ್ಬಂದಿಯೇ ಈ ಬಡಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.
ಅಭಿನಂದನ್ ಕುರಿತು ಮಾತನಾಡಲು ಅವರ ತಂದೆನಿರಾಕರಿಸಿದ್ದಾರೆ. ‘ನನ್ನ ಮಗನ ಕುರಿತು ಏನನ್ನೂ ಕೇಳಬೇಡಿ. ನಮ್ಮ ಖಾಸಗಿತನವನ್ನು ಗೌರವಿಸಿ’ ಎಂದು ಅವರು ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಅಭಿನಂದನ್ ಅವರು ಪಾಕಿಸ್ತಾನ ಸೈನಿಕರ ವಶದಲ್ಲಿರುವ ವಿಡಿಯೊ ಬಹಿರಂಗವಾಗುತ್ತಿದ್ದಂತೆ ಸಂಬಂಧಿಕರು ವರ್ಧಮಾನ್ ಅವರ ಮನೆಗೆ ಬರುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳೂ ಅವರ ಮನೆ ಬಳಿ ಕಿಕ್ಕಿರಿದು ತುಂಬಿದ್ದಾರೆ. ಬಡಾವಣೆ ಬಳಿ ಪೊಲೀಸರ ಭದ್ರತೆ ಹೆಚ್ಚಿಸಲಾಗಿದೆ. ತೀವ್ರ ಪರಿಶೀಲನೆಯ ನಂತರ ಬಡಾವಣೆಯ ನಿವಾಸಿಗಳನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ. ವರ್ಧಮಾನ್ ಅವರ ಸಂಬಂಧಿಕರನ್ನೂ ಒಳಗೆ ಬಿಡುತ್ತಿಲ್ಲ.
ಅಭಿನಂದನ್ ಅವರ ತಾತ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ವಿಂಗ್ ಕಮಾಂಡರ್ ಅವರ ಪತ್ನಿ ಸಹ ವಾಯುಪಡೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಸೇವೆ ಸಲ್ಲಿಸಿ, ಈಗ ನಿವೃತ್ತರಾಗಿದ್ದಾರೆ.ತಮ್ಮ ಮಗುವಿನೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
|
ಮಿಗ್ ಎಂದರೆ ಅಭಿಮಾನ
ಅಭಿನಂದನ್ ಅವರು 2004ರಲ್ಲಿ ವಾಯುಪಡೆಗೆ ಆಯ್ಕೆಯಾಗಿದ್ದರು. ಇಲ್ಲಿನ ತಂಬರಂ ವಾಯನೆಲೆಯಲ್ಲಿ ಅವರು ತರಬೇತಿ ಪಡೆದಿದ್ದರು. ಮಿಗ್–21 ಯುದ್ಧವಿಮಾನ ಚಾಲನೆಯಲ್ಲಿ ಅವರು ಪರಿಣತಿ ಹೊಂದಿದ್ದರು. ಮಿಗ್ ವಿಮಾನವೆಂದರೆ ಅವರಿಗೆ ವಿಪರೀತ ಅಭಿಮಾನ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.