ADVERTISEMENT

‘ಕೈ’ ತಪ್ಪುವ ಪಂಜಾಬ್‌ ಎಎಪಿಗೆ, ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ: ಸಮೀಕ್ಷೆ

ಎಬಿಪಿ–ಸಿ ವೋಟರ್‌ ಸಮೀಕ್ಷೆ: ಉತ್ತರ ‍ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಬಿಜೆಪಿಗೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 1:58 IST
Last Updated 4 ಸೆಪ್ಟೆಂಬರ್ 2021, 1:58 IST
   

ನವದೆಹಲಿ: ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ನಡೆಸಲಾದ ಸಮೀಕ್ಷೆಯ ವರದಿಯು ಕಾಂಗ್ರೆಸ್‌ ಪಕ್ಷಕ್ಕೆ ಭಾರಿ ಆಘಾತಕಾರಿಯಾಗಿದೆ. ಈಗ ಅಧಿಕಾರದಲ್ಲಿರುವ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳಲಿದೆ. ಎಎಪಿ ಅಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಎಬಿಪಿ ಮತ್ತು ಸಿ–ವೋಟರ್‌ ನಡೆಸಿದ ಸಮೀಕ್ಷೆಯು ಹೇಳಿದೆ.

ಪಂಜಾಬ್‌ನಲ್ಲಿ ಯಾವ ಪಕ್ಷಕ್ಕೂ ಸರಳ ಬಹುಮತ ದೊರೆಯದು. ಆದರೆ, ಎಎಪಿಗೆ ಕೆಲವು ಸ್ಥಾನಗಳಷ್ಟೇ ಕೊರತೆ ಆಗಬಹುದು ಎಂದು ಸಮೀಕ್ಷೆ ಹೇಳಿದೆ.

ಗೋವಾದಲ್ಲಿ ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಎರಡನೇ ಸ್ಥಾನ ದೊರೆಯಲಿದೆ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇರುವುದು ಪಂಜಾಬ್‌ನಲ್ಲಿ ಮಾತ್ರ.

ADVERTISEMENT

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸ್ಥಾನಗಳ ಸಂಖ್ಯೆ ಕಡಿಮೆ ಆಗಲಿದೆ. 2017ರಲ್ಲಿ ಇಲ್ಲಿ 312 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಮುಂದಿನ ವರ್ಷದ ಚುನಾವಣೆಯಲ್ಲಿ ಬಿಜೆಪಿಗೆ 50 ಸ್ಥಾನಗಳು ಕಡಿಮೆಯಾಗಬಹುದು. 259–267 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬಹುದು. ಸಮಾಜವಾದಿ ಪಕ್ಷವು ತನ್ನ ಸ್ಥಾನಗಳ ಸಂಖ್ಯೆಯನ್ನು ಈಗಿನ 47ರಿಂದ 109–117ಕ್ಕೆ ಹೆಚ್ಚಿಸಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

19 ಶಾಸಕರನ್ನು ಹೊಂದಿರುವ ಬಿಎಸ್‌ಪಿ 12–16 ಸ್ಥಾನಗಳಿಗೆ ಕುಸಿಯಲಿದೆ. ಕಾಂಗ್ರೆಸ್‌ ಇನ್ನೂ ದುರ್ಬಲವಾಗಿ 3–7 ಕ್ಷೇತ್ರಗಳನ್ನು ಗೆಲ್ಲಲಷ್ಟೇ ಶಕ್ತವಾಗಲಿದೆ. ಪಂಜಾಬ್‌ನಲ್ಲಿ ಎಎಪಿಗೆ 51–57 ಕ್ಷೇತ್ರಗಳಲ್ಲಿ ಗೆಲುವು ದೊರೆಯಬಹುದು. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 59 ಶಾಸಕರ ಬೆಂಬಲ ಬೇಕು.

ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್ ಸಿಧು ನಡುವೆ ತೀವ್ರ ಭಿನ್ನಮತ ಇದೆ. ಹಾಗಾಗಿ, 2017ರಲ್ಲಿ 77 ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌ 38–46 ಸ್ಥಾನಗಳಿಗೆ ಕುಸಿಯಬಹುದು ಎನ್ನಲಾಗಿದೆ. ಉತ್ತರಾಖಂಡದಲ್ಲಿ ಅಧಿಕಾರ ಹಿಡಿಯಬಹುದು ಎಂಬ ನಿರೀಕ್ಷೆ ಕಾಂಗ್ರೆಸ್‌ಗೆ ಇದೆ. ಈಗಿನ ಬಿಜೆಪಿ ನೇತೃತ್ವದ ಸರ್ಕಾರವು ಇಬ್ಬರು ಮುಖ್ಯಮಂತ್ರಿಗಳನ್ನು ಬದಲಾಯಿಸಿದೆ. ಆದರೆ ಕಾಂಗ್ರೆಸ್‌ನ ನಿರೀಕ್ಷೆ ಈಡೇರುವ ಸಾಧ್ಯತೆ ಕ್ಷೀಣ. 70 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 44–48 ಕ್ಷೇತ್ರಗಳನ್ನು ಗೆಲ್ಲಬಹುದು. ಕಾಂಗ್ರೆಸ್‌ಗೆ 19–23 ಕ್ಷೇತ್ರಗಳು ದೊರೆಯಬಹುದು ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ.

ಗೋವಾದಲ್ಲಿ ಬಿಜೆಪಿ 22–26 ಕ್ಷೇತ್ರಗಳನ್ನು ಗೆಲ್ಲಬಹುದು. ಅಲ್ಲಿನ ಒಟ್ಟು ಸದಸ್ಯ ಬಲ 40. 2017ರಲ್ಲಿ ಕಾಂಗ್ರೆಸ್ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊಮ್ಮಿತ್ತು. ಆದರೆ, ಪಕ್ಷಾಂತರದಿಂದಾಗಿ ಬಿಜೆಪಿ ಅಧಿಕಾರಕ್ಕೆ ಏರಿತ್ತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ 3ನೇ ಸ್ಥಾನಕ್ಕೆ ಕುಸಿಯಲಿದೆ. ಎಎಪಿ ಎರಡನೇ ಸ್ಥಾನಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.