ADVERTISEMENT

ಎಸ್‌ಪಿ–ಬಿಎಸ್‌ಪಿ ಹೊಂದಾಣಿಕೆಯಾದರೆ ಎನ್‌ಡಿಎ ಬಹುಮತ ಕಷ್ಟಕಷ್ಟ

ಎಬಿಪಿ ನ್ಯೂಸ್‌–ಸಿ ವೋಟರ್‌ ಜಂಟಿ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 19:17 IST
Last Updated 25 ಡಿಸೆಂಬರ್ 2018, 19:17 IST
   

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಉತ್ತರ ಪ್ರದೇಶದಲ್ಲಿ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಮಾತ್ರ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಸುಲಭವಾಗಿ ಅಧಿಕಾರಕ್ಕೆ ಬರಲಿದೆ ಎಂದು ಎಬಿಪಿ ನ್ಯೂಸ್‌ ಮತ್ತು ಸಿ–ವೋಟರ್‌ ಜಂಟಿಯಾಗಿ ನಡೆಸಿದ ಸಮೀಕ್ಷೆ ಹೇಳಿದೆ.

ಬಿಎಸ್‌ಪಿ ಮತ್ತು ಎಸ್‌ಪಿ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಎನ್‌ಡಿಎ 291 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಹೊಂದಾಣಿಕೆಯಾದರೆ ಎನ್‌ಡಿಎ ಬಲ 247ಕ್ಕೆ ಕುಸಿಯುವ ಸಾಧ್ಯತೆ ಇದೆ. ಇದರಿಂದ ಎನ್‌ಡಿಎಗೆ ಸರಳ ಬಹುಮತ ಪಡೆಯಲು 25 ಸ್ಥಾನಗಳು ಕಡಿಮೆಯಾಗಲಿವೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಬಿಎಸ್‌ಪಿ–ಎಸ್‌ಪಿ ಕೈಜೋಡಿಸಿದರೆ ಯುಪಿಎಗೆ 171 ಮತ್ತು ಇತರರಿಗೆ 125 ಸ್ಥಾನಗಳು ದೊರೆಯಲಿವೆ. ಬಿಎಸ್‌ಪಿ–ಎಸ್‌ಪಿ ಕೈಜೋಡಿಸದಿದ್ದರೂ ಇದರಿಂದ ಯುಪಿಎ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಆದರೆ, ಇತರರು 81 ಸ್ಥಾನಗಳಿಗೆ ಮಾತ್ರ ತೃಪ್ತಿ ಪಡಬೇಕಾಗುತ್ತದೆ.

ADVERTISEMENT

ಬಿಎಸ್‌ಪಿ–ಎಸ್‌ಪಿ ಒಟ್ಟಾಗಿ ಚುನಾವಣೆ ಎದುರಿಸಿದರೆ ಉತ್ತರ ಪ್ರದೇಶದಲ್ಲಿ 50 ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಳ್ಳಲಿವೆ. ಕಾಂಗ್ರೆಸ್‌ ಕೇವಲ ಎರಡು ಸ್ಥಾನ ಪಡೆಯುವ ಸಾಧ್ಯತೆ ಇದೆ. ಮಾಯಾವತಿ ಮತ್ತು ಅಖಿಲೇಶ್‌ ಯಾದವ್‌ ಪ್ರತ್ಯೇಕವಾಗಿ ಕಣಕ್ಕಿಳಿದರೆ ಎನ್‌ಡಿಎ 72 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಕಾಂಗ್ರೆಸ್‌, ಬಿಎಸ್‌ಪಿ, ಎಸ್‌ಪಿ ತಲಾ ಎರಡು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.

ಕಳೆದ ಚುನಾವಣೆಗೆ ಹೋಲಿಸಿದರೆ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಬಿಜೆಪಿ ಕೆಲವು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದರೂ, ಇಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಲಿದೆ ಎಂದು ಸಮೀಕ್ಷೆ ಹೇಳಿದೆ.

ಬಿಹಾರದಲ್ಲಿ ಕಾಂಗ್ರೆಸ್‌ ಆರ್‌ಜೆಡಿ ಮೈತ್ರಿ ಐದು ಮತ್ತು ಬಿಜೆಪಿ, ಜೆಡಿಯು ಹಾಗೂ ಎಲ್‌ಜೆಪಿ ಮೈತ್ರಿಕೂಟ 35 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌–ಎನ್‌ಸಿಪಿ 30 ಮತ್ತು ಎನ್‌ಡಿಎ 18 ಸ್ಥಾನ ಗಳಿಸಲಿವೆ. ಒಡಿಶಾದಲ್ಲಿ ಎನ್‌ಡಿಎ 15 ಮತ್ತು ಆಡಳಿತಾರೂಢ ಬಿಜೆಡಿ ಆರು ಕ್ಷೇತ್ರಗಳಲ್ಲಿ ಜಯಸಾಧಿಸಲಿವೆ.

ದಕ್ಷಿಣ ಭಾರತದಲ್ಲಿ ಯುಪಿಎ ಭಾರಿ ಮುನ್ನಡೆ ಸಾಧಿಸಲಿದೆ. ಯುಪಿಎ 80 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಇಲ್ಲಿ ಎನ್‌ಡಿಎ 15 ಸ್ಥಾನ ಮತ್ತು ಇತರರು 34 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.