ಗುವಾಹಟಿ: ಮುಖ್ಯಮಂತ್ರಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಗುಡ್ಡ ಕತ್ತರಿಸುತ್ತಿರುವುದಕ್ಕೆ ಸಂಬಂಧಿಸಿ ಪ್ರಶ್ನೆ ಕೇಳಿದ ಪತ್ರಕರ್ತರೊಬ್ಬರು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಶ್ನೆಗೆ ಉತ್ತರಿಸಬೇಕಾದ ಶರ್ಮಾ, ಪತ್ರಕರ್ತನ ಧರ್ಮ ಯಾವುದೆಂದು ಕೆದಕಿದ್ದಾರೆ. ಇದಕ್ಕೆ ಪತ್ರಕರ್ತರ ಸಂಘಟನೆಗಳಿಂದ ವ್ಯಾಪಕ ಟೀಕೆ ಮತ್ತು ಖಂಡನೆ ವ್ಯಕ್ತವಾಗಿದೆ.
ಮಂಡಕಟಾ ಪ್ರದೇಶದಲ್ಲಿ ಬೆಟ್ಟಗಳನ್ನು ಕತ್ತರಿಸುತ್ತಿರುವ ಕುರಿತು ಅಸ್ಸಾಂನ ‘ನ್ಯೂಸ್‌ನೌ’ ನ್ಯೂಸ್ ಪೋರ್ಟಲ್‌ನ ಪತ್ರಕರ್ತ ಶಾ ಆಲಂ ಅವರು, ಮುಖ್ಯಮಂತ್ರಿ ಅವರ ಪ್ರತಿಕ್ರಿಯೆ ಕೇಳಿದ್ದಾರೆ. ಅದಕ್ಕೆ ಶರ್ಮಾ, ‘ನಿನ್ನ ಹೆಸರೇನು’ ಎಂದು ಕೇಳಿದ್ದು, ಪತ್ರಕರ್ತ ‘ಶಾ ಆಲಂ’ ಎಂದು ಉತ್ತರಿಸಿದ್ದಾರೆ.
ಆಗ ಶರ್ಮಾ, ‘ಶಾ ಆಲಂ ಮತ್ತು ಮಹಬೂಬುಲ್ ಹಕ್ ಸೇರಿದಂತೆ ನಿಮ್ಮವರು (ಮುಸ್ಲಿಮರು) ನಮ್ಮನ್ನು (ಹಿಂದೂಗಳನ್ನು) ಬದುಕಲು ಬಿಡುವಿರಾ’ ಎಂದು ಪ್ರಶ್ನಿಸಿದ್ದಾರೆ. ಮೇಘಾಲಯದ ಯುಎಸ್‌ಟಿಎಂ ಖಾಸಗಿ ವಿಶ್ವವಿದ್ಯಾಲಯದ ಮಾಲೀಕ ಹಕ್ ಅವರೂ ಈಚೆಗೆ ಗುಡ್ಡ ಕತ್ತರಿಸುವುದರ ಬಗ್ಗೆ ಪ್ರಶ್ನಿಸಿದ್ದರು. ಅಸ್ಸಾಂ–ಮೇಘಾಲಯ ಗಡಿಯುದ್ದಕ್ಕೂ ಬೆಟ್ಟಗಳನ್ನು ಕತ್ತರಿಸಿದ್ದರಿಂದ ಗುವಾಹಟಿಯಲ್ಲಿ ಪ್ರವಾಹ ಉಂಟಾಗಿದೆ ಎಂದು ಆರೋಪಿಸಿದ್ದರು.
‘ಯುಎಸ್‌ಟಿಎಂಅನ್ನು ರಕ್ಷಿಸಲು ನೀನು ಪ್ರಯತ್ನಿಸುತ್ತಿರುವುದು ಏಕೆ? ಅದಕ್ಕೆ ಕಾರಣವೇನು? ನೀನು ಅವರಿಂದ ಜಾಹೀರಾತು ಪಡೆಯುತ್ತಿದ್ದೀಯಾ?’ ಎಂದು ಶರ್ಮಾ ಹೇಳಿದ್ದಾರೆ. ‘ಅಸ್ಸಾಂನಲ್ಲಿ ನಮಗೆ ಜೀವಿಸಲು ಸಾಧ್ಯವೇ, ಇಲ್ಲವೇ ಎಂಬುದನ್ನು ಶಾ ಆಲಂ ಮತ್ತು ಹಕ್ ಅವರು ವಿವರಿಸಿ ಹೇಳಬೇಕು’ ಎಂದಿದ್ದಾರೆ.
‘ಅಸ್ಸಾಂನ ಜನಸಂಖ್ಯಾ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮಿಸಿದರೆ ಅಸ್ಸಾಂನ ಜನರು ಬದುಕುಳಿಯುವರೇ’ ಎಂದೂ ಪ್ರಶ್ನಿಸಿದ್ದಾರೆ.
ಖಂಡನೆ: ಗುವಾಹಟಿ ಪ್ರೆಸ್ ಕ್ಲಬ್, ದಿಸ್ಪುರ ಪ್ರೆಸ್ ಕ್ಲಬ್, ಅಸ್ಸಾಂ ಪತ್ರಕರ್ತರ ಸಂಘ ಮತ್ತು ಅಸ್ಸಾಂ ಮಹಿಳಾ ಪತ್ರಕರ್ತರ ವೇದಿಕೆ ಒಳಗೊಂಡಂತೆ ಪತ್ರಕರ್ತರ ವಿವಿಧ ಸಂಘಟನೆಗಳು ಮುಖ್ಯಮಂತ್ರಿ ಅವರ ನಡೆಯನ್ನು ಖಂಡಿಸಿವೆ.
‘ಪತ್ರಿಕಾ ಸಂವಾದದ ವೇಳೆ ಮುಖ್ಯಮಂತ್ರಿ ಅವರು ಅನಗತ್ಯವಾಗಿ ಪತ್ರಕರ್ತನ ಧರ್ಮದ ಬಗ್ಗೆ ಕೆದಕಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಮತ್ತು ಮಾಧ್ಯಮದ ಘನತೆ ಎತ್ತಿಹಿಡಿಯಲು ಎಲ್ಲ ರಾಜಕೀಯ ನಾಯಕರನ್ನು ಒತ್ತಾಯಿಸುತ್ತೇವೆ’ ಎಂದು ಗುವಾಹಟಿ ಪ್ರೆಸ್ ಕ್ಲಬ್ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.