ಕಚ್(ಗುಜರಾತ್): ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಸದಸ್ಯರು ಪ್ರೊಫೆಸರ್ ಮುಖಕ್ಕೆ ಮಸಿ ಬಳಿದು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮೆರವಣಿಗೆ ಮಾಡಿರುವಘಟನೆ ಮಂಗಳವಾರ ನಡೆದಿದೆ.
ಜೂನ್ 26ರಂದು ಗುಜರಾತ್‌ನ ಕಚ್ ಜಿಲ್ಲೆಯ ಭುಜ್‌ನಲ್ಲಿರುವ ‘ಕ್ರಾಂತಿಗುರು ಶ್ಯಾಮ್‌ಜಿ ಕೃಷ್ಣ ವರ್ಮಾ ಕಚ್ ವಿಶ್ವವಿದ್ಯಾಲಯ’ದಲ್ಲಿ ಪ್ರೊಫೆಸರ್ ಗಿರಿನ್ ಬಕ್ಷಿ ಅವರ ಮುಖಕ್ಕೆ ಮಸಿ ಬಳಿಯಲಾಗಿದೆ.
ಜುಲೈ 22ಕ್ಕೆ ವಿಶ್ವವಿದ್ಯಾಲಯದ ಸೆನೆಟ್ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಎಬಿವಿಪಿ ಬೆಂಬಲಿಗರು ಸಲ್ಲಿಸಿದ್ದ ಮತದಾರರ ನೋಂದಣಿ ಅರ್ಜಿಗಳು ತಿರಸ್ಕೃತಗೊಂಡಿವೆ. ಅರ್ಜಿ ತಿರಸ್ಕೃತಗೊಳ್ಳಲು ಪ್ರೊ.ಬಕ್ಷಿ ಸೇರಿದಂತೆ ಇತರರು ಕಾರಣ ಎಂದು ಎಬಿವಿಪಿ ವಿದ್ಯಾರ್ಥಿ ಮುಖಂಡ ಆರೋಪಿಸಿದ್ದಾರೆ.
ನಿಯಮಗಳ ಪ್ರಕಾರ ಅರ್ಜಿಗಳು ತಿರಸ್ಕೃತಗೊಂಡಿವೆ. ಈ ಸಂಬಂಧ ಮಂಗಳವಾರ ಸಂಜೆ ವಿಚಾರಣೆ ನಿಗದಿಯಾಗಿತ್ತು. ಆದರೆ, ಎಬಿವಿಪಿ ಬೆಂಬಲಿಗರು ಪ್ರೊಫೆಸರ್ ಮೇಲೆ ದಾಳಿ ಮಾಡಿರುವುದಾಗಿ ವಿಶ್ವವಿದ್ಯಾಲಯದ ಉಪ ಕುಲಪತಿ ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ತರಗತಿಯಲ್ಲಿ ಉಪನ್ಯಾಸ ನೀಡುತ್ತಿರುವಾಗ ಪ್ರೊಫೆಸರ್ ಮೇಲೆ ದಾಳಿ ನಡೆಸಿದ ಎಬಿವಿಪಿ ಬೆಂಬಲಿತ ವಿದ್ಯಾರ್ಥಿಗಳು, ಅವರನ್ನು ಎಳೆದಾಡಿ ಮುಖಕ್ಕೆ ಮಸಿ ಬಳಿದಿದ್ದಾರೆ. ತರಗತಿಯಿಂದ ಹೊರಗೆಳೆದು ಪ್ರೊ.ಬಕ್ಷಿ ಅವರನ್ನು ವಿಶ್ವವಿದ್ಯಾಲಯದ ಕ್ಯಾಂಪಸ್‌ನಿಂದ ಉಪ ಕುಲಪತಿ ಕಚೇರಿಯ ವರೆಗೂ ಪರೇಡ್ ಮಾಡಿಸಿದ್ದಾರೆ. ದಾಳಿಯ ನಂತರ ಚರ್ಮದಲ್ಲಿ ಉಂಟಾದ ಕಿರಿಕಿರಿಯಿಂದಾಗಿ ಪ್ರೊಫೆಸರ್ ಆಸ್ಪತ್ರೆಗೆ ತೆರಳಿದ್ದಾರೆ.
15–20 ವಿದ್ಯಾರ್ಥಿಗಳ ಗುಂಪಿನ ವಿರುದ್ಧ ಭುಜ್ ಪೊಲೀಸರು ಐಪಿಸಿ ಸೆಕ್ಷನ್ 326, 332ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.