ADVERTISEMENT

ಪಾನೀಯದಲ್ಲಿ ರಾಸಾಯನಿಕ ಬೆರೆಸಿ ಸೊನಾಲಿ ಫೋಗಟ್‌ಗೆ ಕುಡಿಸಿದ್ದ ಆರೋಪಿಗಳು 

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 10:30 IST
Last Updated 26 ಆಗಸ್ಟ್ 2022, 10:30 IST
ಸೊನಾಲಿ ಫೋಗಟ್‌
ಸೊನಾಲಿ ಫೋಗಟ್‌    

ಪಣಜಿ: ಟಿಕ್‌ಟಾಕ್ ತಾರೆ, ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರಿಗೆ ಪಾನೀಯದಲ್ಲಿ ರಾಸಾಯನಿಕವನ್ನು ಬೆರೆಸಿ ಕುಡಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ.

ಗೋವಾ ಐಜಿಪಿ ಓಂವೀರ್‌ ಸಿಂಗ್‌ ಬಿಷ್ನೋಯಿ ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ಬಹಿರಂಗಪಡಿಸಿದ್ದಾರೆ.

‘ಆರೋಪಿ ಸುಧೀರ್ ಸಂಗ್ವಾನ್ ಮತ್ತು ಅತನ ಸಹವರ್ತಿ ಸುಖ್ವಿಂದರ್ ವಾಸಿ ಕ್ಲಬ್‌ನಲ್ಲಿ ಸೊನಾಲಿ ಫೋಗಟ್‌ ಅವರೊಂದಿಗೆ ಪಾರ್ಟಿ ಮಾಡುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಗೊತ್ತಾಗಿದೆ. ಇಬ್ಬರಲ್ಲಿ ಒಬ್ಬಾತ ಫೋಗಟ್‌ ಅವರಿಗೆ ಬಲವಂತವಾಗಿ ದ್ರವವೊಂದನ್ನು ಕುಡಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ’ ಎಂದು ಐಜಿಪಿ ಓಂವೀರ್‌ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ADVERTISEMENT

‘ಆರೋಪಿಗಳಾದ ಸುಖ್ವಿಂದರ್ ಮತ್ತು ಸುಧೀರ್ ಇಬ್ಬರೂ ಸೊನಾಲಿ ಫೋಗಟ್‌ ಅವರಿಗೆ ಉದ್ದೇಶಪೂರ್ವಕವಾಗಿ ರಾಸಾಯನಿಕವೊಂದನ್ನು ಪಾನೀಯದಲ್ಲಿ ಬೆರೆಸಿ ಕುಡಿಸಿದ್ದಾಗಿ ಒಪ್ಪಿಕೊಂಡರು’ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ನಾಯಕಿ, ನಟಿ ಸೊನಾಲಿ ಫೋಗಟ್‌ (42) ಸೋಮವಾರ ರಾತ್ರಿ ಗೋವಾದಲ್ಲಿ ಮೃತಪಟ್ಟಿದ್ದರು. ಹೃದಯಾಘಾತದಿಂದ ಅವರು ಸಾವಿಗೀಡಾಗಿರುವುದಾಗಿ ಮೊದಲಿಗೆ ಹೇಳಲಾಗಿತ್ತು. ಅದರೆ, ಅವರ ಮರಣೋತ್ತರ ಪರೀಕ್ಷೆ ವರದಿ ಗುರುವಾರ ಬಹಿರಂಗವಾಗಿದ್ದು, ಅವರ ದೇಹದ ಮೇಲೆ ಗಾಯಗಳಾಗಿರುವುದು ತಿಳಿದುಬಂದಿತ್ತು. ಹೀಗಾಗಿ ನಟಿ ಕೊಲೆಯಾಗಿರುವುದು ಖಚಿತವಾಗಿತ್ತು.

ಪ್ರಕರಣ ಸಂಬಂಧ ಗೋವಾ ಪೊಲೀಸರು ಸುಧೀರ್ ಸಂಗ್ವಾನ್ ಹಾಗೂ ಸುಖ್ವಿಂದರ್ ವಾಸಿ ಎಂಬುವರನ್ನು ಆರೋಪಿಗಳೆಂದು ಪರಿಗಣಿಸಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ಇಬ್ಬರೂ, ನಟಿಯೊಂದಿಗೆ ಗೋವಾಕ್ಕೆ ಆಗಮಿಸಿದ್ದರು.

ಸೊನಾಲಿ ಅವರು 2019ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹಿಸಾರ್‌ ಜಿಲ್ಲೆಯ ಆದಂಪುರ ಕ್ಷೇತ್ರದಿಂದ ಕುಲ್‌ದೀಪ್‌ ಬಿಷ್ಣೋಯಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ, ಚುನಾವಣಾ ಕಣದಲ್ಲಿ ಭಾರಿ ಸದ್ದು ಮಾಡಿದ್ದರು.

ಟಿಕ್ ಟಾಕ್‌ನಲ್ಲಿ ಜನಪ್ರಿಯರಾಗಿದ್ದ ಸೊನಾಲಿ ಫೋಗಟ್‌, 14ನೇ ಆವೃತ್ತಿಯ ‘ಬಿಗ್‌ಬಾಸ್’ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.