ಜಾಲ್ನಾ(ಮಹಾರಾಷ್ಟ್ರ): ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಕಾಂತ್ ಪಾಂಗಾರ್ಕರ್, ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಜಾಲ್ನಾದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡ ಅರ್ಜುನ್ ಖೋಟ್ಕರ್ ಸಮ್ಮುಖದಲ್ಲಿ ಶ್ರೀಕಾಂತ್, ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಜುನ್ ಖೋಟ್ಕರ್,‘ಪಾಂಗಾರ್ಕರ್ ಮಾಜಿ ಶಿವಸೈನಿಕನಾಗಿದ್ದು, ಪಕ್ಷಕ್ಕೆ ಮರಳಿದ್ದಾರೆ. ಅವರನ್ನು ಜಾಲ್ನಾ ವಿಧಾನಸಭೆ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ’ ಎಂದು ಹೇಳಿದ್ದಾರೆ.
ಶ್ರೀಕಾಂತ್ ಅವರು 2001ರಿಂದ 2006ರವರೆಗೆ ಶಿವಸೇನಾದ (ಆಗ ಪಕ್ಷವು ಇಬ್ಭಾಗವಾಗಿರಲಿಲ್ಲ) ಜಾಲ್ನಾ ಪಾಲಿಕೆಯ ಸದಸ್ಯರಾಗಿದ್ದರು.
2011ರಲ್ಲಿ ಟಿಕೆಟ್ ಸಿಗದ ಕಾರಣ, ಶಿವಸೇನಾ ತೊರೆದಿದ್ದ ಶ್ರೀಕಾಂತ್ ಹಿಂದೂ ಜನಜಾಗೃತಿ ಸಮಿತಿ ಸೇರಿದ್ದರು.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅವರನ್ನು 2018ರ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಕಳೆದ ಸೆಪ್ಟೆಂಬರ್ 4ರಂದು ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.