ADVERTISEMENT

ಯುವತಿಯ ದೇಹ ಕಾರಿನಡಿ ಸಿಲುಕಿರುವುದು ಆರೋಪಿಗಳಿಗೆ ಗೊತ್ತಿತ್ತು: ಪೊಲೀಸ್ ಮಾಹಿತಿ

ಮೃತದೇಹ ಎಳೆದೊಯ್ದಿದ್ದ ಪ್ರಕರಣ

ಪಿಟಿಐ
Published 9 ಜನವರಿ 2023, 12:42 IST
Last Updated 9 ಜನವರಿ 2023, 12:42 IST
ಅಂಜಲಿ ಸಿಂಗ್‌ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಹೋದ ವಾರ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದ್ದರು–ಪಿಟಿಐ ಚಿತ್ರ
ಅಂಜಲಿ ಸಿಂಗ್‌ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಹೋದ ವಾರ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದ್ದರು–ಪಿಟಿಐ ಚಿತ್ರ   

ನವದೆಹಲಿ: ‘ಸ್ಕೂಟಿಗೆ ಕಾರು ಡಿಕ್ಕಿ ಹೊಡೆದ ಬಳಿಕ ಯುವತಿಯ ದೇಹವು ಕಾರಿನ ಚಕ್ರಗಳ ಅಡಿಯಲ್ಲಿ ಸಿಲುಕಿಕೊಂಡಿತ್ತು. ಅದು ಆರೋಪಿಗಳ ಗಮನಕ್ಕೂ ಬಂದಿತ್ತು. ಹೀಗಿದ್ದರೂ ಅವರು ಕಾರು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದರು’ ಎಂದು ಪೊಲೀಸ್‌ ಮೂಲಗಳು ಸೋಮವಾರ ತಿಳಿಸಿವೆ.

ದೆಹಲಿ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ಇತ್ತೀಚೆಗೆ ನಡೆದಿದ್ದ ಘಟನೆಯಲ್ಲಿ ಅಂಜಲಿ ಸಿಂಗ್‌ ಎಂಬುವರು ಮೃತಪಟ್ಟಿದ್ದರು. ಕಾರಿನಡಿ ಸಿಲುಕಿದ್ದ ಆಕೆಯ ಮೃತದೇಹವನ್ನು ಸುಮಾರು 12 ಕಿ.ಮೀ.ವರೆಗೂ ಎಳೆದೊಯ್ಯಲಾಗಿತ್ತು. ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದರು. ಆರೋಪಿಗಳಿಗೆ ರಕ್ಷಣೆ ನೀಡಿದ್ದ ಹಿನ್ನೆಲೆಯಲ್ಲಿ ಅಶುತೋಷ್‌ ಹಾಗೂ ಅಂಕುಶ್‌ ಖನ್ನಾ ಎಂಬುವರನ್ನೂ ವಶಕ್ಕೆ ಪಡೆದಿದ್ದರು.

‘ಡಿಸೆಂಬರ್‌ 31ರ ರಾತ್ರಿ ಆರೋಪಿಗಳು ಕಾರಿನಲ್ಲೇ ಪಾರ್ಟಿ ಮಾಡಿದ್ದರು. ಘಟನೆಗೂ ಮುನ್ನ ಐವರ ಪೈಕಿ ಒಬ್ಬಾತ ಕಾರಿನಿಂದ ಇಳಿದು ಮನೆಗೆ ಹೋಗಿದ್ದ. ಕಾರು ಸ್ಕೂಟಿಗೆ ಡಿಕ್ಕಿ ಹೊಡೆದ ಬಳಿಕ ಅಂಜಲಿ ಸಿಂಗ್‌ ದೇಹ ಚಕ್ರಗಳ ಅಡಿಯಲ್ಲಿ ಸಿಲುಕಿರುವುದು ಆರೋಪಿಗಳ ಅರಿವಿಗೆ ಬಂದಿತ್ತು. ಕಾರಿನಿಂದ ಇಳಿದು ಆಕೆಯನ್ನು ರಕ್ಷಿಸಲು ಮುಂದಾದರೆ ತಮ್ಮನ್ನು ಯಾರಾದರೂ ನೋಡಿಬಿಡಬಹುದು ಎಂದು ಹೆದರಿದ್ದ ಅವರು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದರು’ ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

‘ವಿಚಾರಣೆ ವೇಳೆ ಆರೋಪಿಗಳು ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಹೇಳಿಕೆಗಳನ್ನು ಪರಾಮರ್ಶಿಸಲಾಗುತ್ತದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ ಸ್ಪಷ್ಟ ಚಿತ್ರಣ ಕಂಡುಕೊಳ್ಳಲಾಗುತ್ತದೆ’ ಎಂದೂ ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.