ಚೆನ್ನೈ: ‘ದಿ ರಿಪೋರ್ಟ್‌ರ್ಸ್ ಕಲೆಕ್ಟಿವ್’ನ ತಪಸ್ಯ. ಟಿ ಮತ್ತು ನಿತಿನ್ ಸೇಥಿ ಅವರು ತನಿಖಾ ಪತ್ರಿಕೋದ್ಯಮ ವಿಭಾಗದಲ್ಲಿ ‘ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ’ (ಎಸಿಜೆ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಖಿಲೇಶ್ ಪಾಂಡೆ ಅವರಿಗೆ ಸಾಮಾಜಿಕ ಪರಿಣಾಮ ಪತ್ರಿಕೋದ್ಯಮ ವಿಭಾಗದಲ್ಲಿ ನೀಡಲಾಗುವ ‘ಕೆ.ಪಿ. ನಾರಾಯಣ ಕುಮಾರ್ ಸ್ಮಾರಕ ಪ್ರಶಸ್ತಿ’ ಸಂದಿದೆ.
ಅರಣ್ಯ ಸಂರಕ್ಷಣೆ ಮತ್ತು ಸ್ಥಳೀಯ ಹಕ್ಕುಗಳ ಮೇಲೆ ವಾಣಿಜ್ಯ ಹಿತಾಸಕ್ತಿಗಳಿಗೆ ಕೇಂದ್ರ ಸರ್ಕಾರ ಹೇಗೆ ಒಲವು ತೋರಿತ್ತು. ಕೇಂದ್ರ ಸರ್ಕಾರ ತಾನು ಹೇಳಿದ್ದ ಉದ್ದೇಶಗಳಿಂದ ಹೇಗೆ ಹಿಂದೆ ಸರಿಯಿತು ಎಂಬುದನ್ನು ‘ದಿ ರಿಪೋರ್ಟ್‌ರ್ಸ್ ಕಲೆಕ್ಟಿವ್’ನ ತಪಸ್ಯ. ಟಿ ಮತ್ತು ನಿತಿನ್ ಸೇಥಿ ಅವರ ತನಿಖಾ ವರದಿ ‘ಫಾರೆಸ್ಟ್ಸ್ ಫಾರ್ ಪ್ರಾಫಿಟ್ಸ್’ ಸರಣಿಯು ಬಹಿರಂಗಪಡಿಸಿತ್ತು.
ಅಖಿಲೇಶ್ ಪಾಂಡೆ ಅವರ ‘ಡೇಂಜರಸ್ ವಾಟರ್ಸ್’ ಲೇಖನವು ‘ದಿ ಕ್ಯಾರವಾನ್’ ಮ್ಯಾಗಜೀನ್‌ನಲ್ಲಿ ಪ್ರಕಟವಾಗಿತ್ತು.
‘ಫ್ರಂಟ್‌ಲೈನ್ ಮ್ಯಾಗಜೀನ್‘ನಲ್ಲಿ ಪ್ರಕಟವಾದ ‘ದಿ ಹಂಗ್ರಿ ರಿವರ್ ಇನ್ ವೆಸ್ಟ್‌ಬೆಂಗಾಲ್ ಈಟ್ಸ್ ಅಪ್ ಹೋಮ್ಸ್ ಓವರ್‌ನೈಟ್’ ಶೀರ್ಷಿಕೆಯ ಚಿತ್ರಗಳ ಸರಣಿಗಾಗಿ ಛಾಯಾಚಿತ್ರ ಪತ್ರಕರ್ತ ಸುದೀಪ್ ಮೈತಿ ಅವರಿಗೆ ‘ಆಶಿಶ್ ಯೆಚೂರಿ ಸ್ಮಾರಕ ಪ್ರಶಸ್ತಿ’ ಸಂದಿದೆ.
ಸಮಿತಿ ಅಧ್ಯಕ್ಷರಾದ ರಾಹುಲ್ ಜೇಕಬ್, ಸದಸ್ಯರಾದ ಅಮ್ಮು ಜೋಸೆಫ್, ಗೌತಮ್ ಭಾಟಿಯಾ ಅವರಿದ್ದ ತೀರ್ಪುಗಾರರ ತಂಡವು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿತು. ಎಸಿಜೆ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತನಿಖಾ ಪತ್ರಿಕೋದ್ಯಮ ಪ್ರಶಸ್ತಿಗೆ ₹2 ಲಕ್ಷ, ಸಾಮಾಜಿಕ ಪರಿಣಾಮ ಪ್ರಶಸ್ತಿ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಿಗೆ ಫಲಕದೊಂದಿಗೆ ₹1 ಲಕ್ಷ ನಗದು ನೀಡಲಾಯಿತು.
ಎಸಿಜೆ ಪ್ರಶಸ್ತಿಗಳ ಸಮಿತಿಗೆ ನಾಲ್ಕು ಭಾಷೆಗಳ 101 ಸುದ್ದಿ ಸಂಸ್ಥೆಗಳು ಮತ್ತು 275 ಪತ್ರಕರ್ತರು ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.