ನವದೆಹಲಿ: ‘ನೀಟ್–ಯುಜಿ’ ಪರೀಕ್ಷೆ ನಿರ್ವಹಣೆಯಲ್ಲಿ ಯಾವುದೇ ಲೋಪ ಆಗಿದ್ದರೆ ಅದನ್ನು ಒಪ್ಪಿಕೊಂಡು, ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಅದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್‌ಟಿಎ) ಸುಪ್ರೀಂ ಕೊರ್ಟ್ ಸೂಚಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳ ಕಾರಣ 2024ರ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್.ವಿ.ಎನ್.ಭಟ್ಟಿ ಅವರ ಪೀಠ ಮಂಗಳವಾರ ನಡೆಸಿತು.
‘ನೀಟ್–ಯುಜಿ’ ಪರೀಕ್ಷೆಯ ನಿರ್ವಹಣೆಯಲ್ಲಿ ಶೇ 0.001ರಷ್ಟು ಲೋಪ ಆಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿ, ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಪೀಠ ನಿರ್ದೇಶಿಸಿತು.
ವಂಚಕ ವೈದ್ಯನಾದರೆ ಹಾನಿ: ವಿದ್ಯಾರ್ಥಿಗಳು ಈ ಪರೀಕ್ಷಾ ಸಿದ್ಧತೆಗೆ ಬಹಳ ಪರಿಶ್ರಮ ಹಾಕಿರುತ್ತಾರೆ ಎಂಬುದು ತಿಳಿದಿದೆ. ಆದರೆ, ಪರೀಕ್ಷೆಯಲ್ಲಿ ವಂಚನೆ ಮಾಡಿದ ವ್ಯಕ್ತಿ ವೈದ್ಯನಾದರೆ ಸಮಾಜಕ್ಕೆ ಹೆಚ್ಚಿನ ಹಾನಿ ಆಗುತ್ತದೆ. ಆದ್ದರಿಂದ ಈ ದಿಸೆಯಲ್ಲಿ ಸಮಯೋಚಿತ ಕ್ರಮ ತೆಗೆದುಕೊಳ್ಳುವುದನ್ನು ಬಯಸುತ್ತೇವೆ ಎಂದು ಪೀಠ ಹೇಳಿದೆ.
‘ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ’ ಎಂದು ಕೇಂದ್ರದ ಪರ ವಾದ ಹಾಜರಾದ ವಕೀಲ ಕನು ಅಗರ್‌ವಾಲ್ ಹೇಳಿದರು.
ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ ಎಂದ ಪೀಠವು, ‘ಎಷ್ಟು ಮೊಬೈಲ್ ಫೋನ್‌ಗಳನ್ನು ಬಳಸಲಾಗಿದೆ...’ ಎಂದು ಪ್ರಶ್ನಿಸಿತು.
ಕೇಂದ್ರ, ಎನ್‌ಟಿಎಗೆ ನೋಟಿಸ್: ಮೇ 5ರಂದು ನಡೆದ ಪರೀಕ್ಷೆ ಮತ್ತು ಜೂನ್ 4ರಂದು ಪ್ರಕಟಿಸಿದ ಫಲಿತಾಂಶಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹೊಸ ಅರ್ಜಿಗಳಿಗೆ 15 ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಪೀಠವು ಕೇಂದ್ರ ಮತ್ತು ಎನ್‌ಟಿಎಗೆ ನೋಟಿಸ್ ಜಾರಿ ಮಾಡಿದೆ. ಈ ಕುರಿತ ಅರ್ಜಿಗಳನ್ನು ಇತರ ಅರ್ಜಿಗಳ ಜತೆ ಜುಲೈ 8ರಂದು ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಮೇ 5ರಂದು ದೇಶದಾದ್ಯಂತ ನಡೆದಿದ್ದ ‘ನೀಟ್–ಯುಜಿ’ ಪರೀಕ್ಷೆಯನ್ನು ಸುಮಾರು 24 ಲಕ್ಷ ಅಭ್ಯರ್ಥಿಗಳು ಬರೆದಿದ್ದರು. ಕೆಲವೆಡೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳ ಕುರಿತು ಆರೋಪಗಳು ವ್ಯಕ್ತವಾದವು. ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಸಮಯ ನಷ್ಟ ಅನುಭವಿಸಿದ 1,563 ಅಭ್ಯರ್ಥಿಗಳಿಗೆ ಕೃಪಾಂಕಗಳನ್ನು ನೀಡಲಾಯಿತು. ಇದು ಇತರ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿ, ದೇಶದ ವಿವಿಧೆಡೆ ಪ್ರತಿಭಟನೆಗಳು ಜರುಗಿದವು.
ಮೇ 5ರಂದು ದೇಶದಾದ್ಯಂತ ನಡೆದಿದ್ದ ‘ನೀಟ್–ಯುಜಿ’ ಪರೀಕ್ಷೆಯನ್ನು ಸುಮಾರು 24 ಲಕ್ಷ ಅಭ್ಯರ್ಥಿಗಳು ಬರೆದಿದ್ದರು. ಕೆಲವೆಡೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳ ಕುರಿತು ಆರೋಪಗಳು ವ್ಯಕ್ತವಾದವು. ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಸಮಯ ನಷ್ಟ ಅನುಭವಿಸಿದ 1,563 ಅಭ್ಯರ್ಥಿಗಳಿಗೆ ಕೃಪಾಂಕಗಳನ್ನು ನೀಡಲಾಯಿತು. ಇದು ಇತರ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿ, ದೇಶದ ವಿವಿಧೆಡೆ ಪ್ರತಿಭಟನೆಗಳು ಜರುಗಿದವು.
ದೇಶದಾದ್ಯಂತ 67 ಅಭ್ಯರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದು ಅಗ್ರ ಶ್ರೇಯಾಂಕವನ್ನು ಹಂಚಿಕೊಂಡಿದ್ದರು. ಇದರಲ್ಲಿ ಹರಿಯಾಣದ ಫರೀದಾಬಾದ್‌ನ ಒಂದೇ ಕೇಂದ್ರದ ಆರು ಅಭ್ಯರ್ಥಿಗಳು ಸೇರಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು. ಪರೀಕ್ಷಾ ಸಮಯದಲ್ಲಿ ಆದ ನಷ್ಟವನ್ನು ಸರಿದೂಗಿಸಲು ನೀಡಲಾದ ಕೃಪಾಂಕಗಳಿಂದ ಈ ಆರು ಅಭ್ಯರ್ಥಿಗಳಿಗೆ ಗರಿಷ್ಠ ಅಂಕಗಳು ದೊರೆತಿದ್ದವು ಎಂದು ಎನ್‌ಟಿಎ ಹೇಳಿತ್ತು. ಈ ಕುರಿತ ಅಕ್ರಮಗಳನ್ನು ಪ್ರಶ್ನಿಸಿ ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.
ಇದರ ಬೆನ್ನಲ್ಲೇ 1,563 ಅಭ್ಯರ್ಥಿಗಳಿಗೆ ನೀಡಲಾಗಿದ್ದ ಕೃಪಾಂಕವನ್ನು ಹಿಂತೆಗೆದುಕೊಂಡು, ಆ ಅಭ್ಯರ್ಥಿಗಳಿಗೆ ಇದೇ 23ರಂದು ಮರು ಪರೀಕ್ಷೆ ನಡೆಸಿ, ಇದೇ 30ರಂದು ಫಲಿತಾಂಶ ಪ್ರಕಟಿಸುವುದಾಗಿ ಎನ್‌ಟಿಎ ಜೂನ್ 13ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತು. ಇದಕ್ಕೆ ನ್ಯಾಯಾಲಯ ಅನುಮೋದನೆ ನೀಡಿತು. ಅಲ್ಲದೆ ಜುಲೈ 6ರಿಂದ ಪ್ರಾರಂಭವಾಗಲಿರುವ ಕೌನ್ಸೆಲಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಅಂಕಿ ಅಂಶಗಳು
24 ಲಕ್ಷ: ನೀಟ್–ಯುಜಿ ಬರೆದಿದ್ದ ಅಭ್ಯರ್ಥಿಗಳು
1,563: ಪರೀಕ್ಷಾ ಸಮಯ ನಷ್ಟಕ್ಕೆ ಕೃಪಾಂಕ ಪಡೆದವರು (ಕೃಪಾಂಕವನ್ನು ಹಿಂಪಡೆಯಲಾಗಿದೆ)
67: ಅಗ್ರ ಶ್ರೇಯಾಂಕ ಪಡೆದ ಅಭ್ಯರ್ಥಿಗಳು
ಜೂನ್ 23: 1,563 ಅಭ್ಯರ್ಥಿಗಳಿಗೆ ಮರು ಪರೀಕ್ಷೆ
ಜೂನ್ 30: ಮರು ಪರೀಕ್ಷೆಯ ಫಲಿತಾಂಶ
ಜುಲೈ 6: ವೈದ್ಯಕೀಯ ಕೋರ್ಸ್‌ಗಳಿಗೆ ಕೌನ್ಸೆಲಿಂಗ್ ಆರಂಭ
ನವದೆಹಲಿ: ನೀಟ್ ಪರೀಕ್ಷೆ ವಿಷಯದಲ್ಲಿ ‘ಮೌನ’ ಕಾಪಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರಬಲ ಕಾನೂನು ರೂಪಿಸಲು ತಮ್ಮ ಪಕ್ಷ ಹೋರಾಟ ನಡೆಸಲಿದೆ. ಬೀದಿಗಳಿಂದ ಹಿಡಿದು ಸಂಸತ್ತಿನವರೆಗೂ ಯುವಜನರ ಧ್ವನಿಯಾಗಲು ಪಕ್ಷ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು.
ಬಿಹಾರ, ಗುಜರಾತ್ ಮತ್ತು ಹರಿಯಾಣದಲ್ಲಿ ಕೆಲವರನ್ನು ಬಂಧಿಸಿರುವುದು, ನೀಟ್ ಪರೀಕ್ಷೆಯಲ್ಲಿ ವ್ಯವಸ್ಥಿತ ರೀತಿಯಲ್ಲಿ ಅಕ್ರಮ ನಡೆದಿರುವುದನ್ನು ಸ್ಪಷ್ಟಪಡಿಸುತ್ತದೆ. ಬಿಜೆಪಿ ಆಡಳಿತವಿರುವ ಈ ರಾಜ್ಯಗಳು ಪ್ರಶ್ನೆ ಪತ್ರಿಕೆ ಸೋರಿಕೆಯ ‘ಕೇಂದ್ರ’ ಗಳಾಗಿವೆ ಎಂದು ಆರೋಪಿಸಿದರು.
ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕಠಿಣ ಕಾನೂನು ರೂಪಿಸುವ ಮೂಲಕ ಯುವಕರ ಭವಿಷ್ಯವನ್ನು ಸುಭದ್ರಗೊಳಿಸುವ ಭರವಸೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಪ್ರಬಲ ಕಾನೂನು ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ನೀಟ್ ಪರೀಕ್ಷೆ ಬರೆದ 24 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ ನರೇಂದ್ರ ಮೋದಿ ಎಂದಿನಂತೆ ಮೌನ ವಹಿಸಿದ್ದಾರೆ.-ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.