ನವದೆಹಲಿ: ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂಥ ಒಟಿಟಿ ವೇದಿಕೆಗಳನ್ನುಸ್ವಾಯತ್ತ ಸಂಸ್ಥೆಯೊಂದರ ಮೂಲಕ ನಿಯಂತ್ರಿಸುವ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಜಸ್ಟಿಸ್ ಫಾರ್ ರೈಟ್ಸ್ ಫೌಂಡೇಶನ್ ಎಂಬ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ, ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠವು, ‘ನೀವೇನು ಕಾನೂನು ಮಾಡುತ್ತಿರುವಿರೋ ಏನು? ಸರ್ಕಾರ ಪರಿಗಣಿಸುತ್ತಿದೆ, ಚಿಂತನೆ ನಡೆಸುತ್ತಿದೆ ಎಂದಷ್ಟೇ ಹೇಳಿದರೆ ಸಾಲದು, ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜನ್ ಅವರಿಗೆ ಸೂಚಿಸಿದೆ.
ಆನ್‌ಲೈನ್ ವೇದಿಕೆಗಳಲ್ಲಿ ಆಕ್ಷೇಪಾರ್ಹ ಮತ್ತು ಅಶ್ಲೀಲ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದನ್ನು ನಿಯಂತ್ರಿಸಲು ಸ್ವಾಯತ್ತ ಸಂಸ್ಥೆಯೊಂದನ್ನು ರಚಿಸುವಂತೆ ವಕೀಲರಾದ ಶಶಾಂಕ್ ಶೇಖರ್ ಝಾ ಹಾಗೂ ಅಪೂರ್ವ ಅರ್ಹತಿಯಾ ಅವರು ಜಂಟಿಯಾಗಿ ಮನವಿ ಸಲ್ಲಿಸಿದ್ದರು.
‘ಡಿಜಿಟಲ್ ಮಾಧ್ಯಮದಲ್ಲಿ ಲಭ್ಯವಾಗುವ ಮನರಂಜನೆಯನ್ನು ನಿಯಂತ್ರಿಸಲು ಪ್ರಸಕ್ತ ಯಾವುದೇ ಕಾನೂನಾಗಲಿ, ಸ್ವಾಯತ್ತ ಸಂಸ್ಥೆಯಾಗಲಿ ಇಲ್ಲ. ಒಟಿಟಿ ಮಾಧ್ಯಮದಲ್ಲಿ ಶುಲ್ಕ ಪಡೆದು, ಜಾಹೀರಾತು ಸಹಿತವಾದ ಹಾಗೂ ಉಚಿತವಾಗಿ ಕಾರ್ಯಕ್ರಮಗಳನ್ನು ಒದಗಿಸುವ ಸಮಾರು 40 ಸಂಸ್ಥೆಗಳು ಸಂವಿಧಾನದಲ್ಲಿ ದತ್ತವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸುತ್ತಿವೆ’ ಎಂದು ಅರ್ಜಿದಾರರು ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.