ಮುಂಬೈ: ರಾಜ್ಯ ಸರ್ಕಾರ ಹೊಸ ಲಾಕ್‌ಡೌನ್ ತರಹದ ನಿರ್ಬಂಧಗಳನ್ನು ವಿಧಿಸದಿದ್ದರೆ ಮಹಾರಾಷ್ಟ್ರವು ಒಂಬತ್ತರಿಂದ ಹತ್ತು ಲಕ್ಷ ಸಕ್ರಿಯ ಕೊರೊನಾವೈರಸ್ ಪ್ರಕರಣಗಳನ್ನು ಕಾಣುತ್ತಿತ್ತು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ಹೇಳಿದ್ದಾರೆ.
ಲಸಿಕೆ ಡೋಸ್‌ಗಳ ಲಭ್ಯತೆಯ ಪ್ರಕಾರ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್-19 ವಿರುದ್ಧದ ಚುಚ್ಚುಮದ್ದು ನೀಡುವ ಕಾರ್ಯಕ್ರಮ ಶನಿವಾರದಿಂದ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ ಅವರು, ಸಂಪೂರ್ಣ ಲಾಕ್‌ಡೌನ್ ಅಗತ್ಯವಾಗಬಹುದು ಆದರೆ 'ನಾವು ಆ ಹಂತವನ್ನು ತಲುಪುತ್ತೇವೆ ಎಂದು ನಾನು ಭಾವಿಸುವುದಿಲ್ಲ' ಎಂದು ಹೇಳಿದರು.
ಇತ್ತೀಚಿಗೆ ಹೇರಿರುವ ನಿರ್ಬಂಧಗಳು ಕೊರೊನವೈರಸ್ ಪ್ರಕರಣಗಳ ದೈನಂದಿನ ಏರಿಕೆ ತಡೆ ಮತ್ತು ಸಕ್ರಿಯ ಪ್ರಕರಣಗಳು ಈಗ ಸುಮಾರು 6.5 ಲಕ್ಷಕ್ಕೆ ಸ್ಥಿರವಾಗಿರಲು ನೆರವಾಗಿದೆ ಎಂದು ಮಹಾರಾಷ್ಟ್ರದ ಸಂಸ್ಥಾಪನಾ ದಿನದ ಮುನ್ನಾದಿನದಂದು ದೂರದರ್ಶನದ ಭಾಷಣದಲ್ಲಿ ಠಾಕ್ರೆ ಹೇಳಿದ್ದಾರೆ.
'ನಾವು ಕಳೆದ ವರ್ಷ ಮಾಡಿದಂತೆ ಈ ಕೊರೊನಾ ವೈರಸ್ ಅಲೆಯನ್ನು ಎದುರಿಸಲು ಒಟ್ಟಿಗೆ ಹೋರಾಡುತ್ತೇವೆ'. 18 ರಿಂದ 44ರ ವಯೋಮಾನದವರಿಗೆ ಚುಚ್ಚುಮದ್ದಿಗೆ ಅಗತ್ಯವಿರುವ 12 ಕೋಟಿ ಡೋಸ್‌ಗಳನ್ನು ಸಂಗ್ರಹಿಸಲು ರಾಜ್ಯವು ಒಂದೇ ಬಾರಿಗೆ ಚೆಕ್ ಮೂಲಕ ಪಾವತಿ ಮಾಡುತ್ತದೆ ಎಂದು ತಿಳಿಸಿದರು.
ಡೋಸೇಜ್ ಲಭ್ಯತೆಯ ಪ್ರಕಾರ ಈ ವರ್ಗಕ್ಕೆ ಲಸಿಕೆ ಅಭಿಯಾವು ಶನಿವಾರದಿಂದ ಪ್ರಾರಂಭವಾಗಲಿದ್ದು, ಶುಕ್ರವಾರ ರಾಜ್ಯಕ್ಕೆ ಮೂರು ಲಕ್ಷ ಡೋಸ್ ಲಸಿಕೆಗಳು ಬಂದಿವೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.