ನವದೆಹಲಿ: ಗಾಜಾ ಪಟ್ಟಿ ಕುರಿತು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಬಿಕ್ಕಟ್ಟಿನಲ್ಲಿ ಅಮೆರಿಕದ ನಿಲುವು ಖಂಡಿಸಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಡೆದಿದ್ದ ಪದವಿಯನ್ನು ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ ಹಿಂದಿರುಗಿಸಿದ್ದಾರೆ.
ಇದೇ ವಿಷಯವಾಗಿ ತಮಗೆ 2002ರಲ್ಲಿ ಸಂದಿದ್ದ ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಕಳೆದ ಜನವರಿಯಲ್ಲಿ ಹಿಂದಿರುಗಿಸಲು ಪಾಂಡೆ ನಿರ್ಧರಿಸಿದ್ದರು. ಅಷ್ಟು ಮಾತ್ರವಲ್ಲದೇ, ಸೈರಕುಸ್ ವಿಶ್ವವಿದ್ಯಾಲಯದಿಂದ ಪಡೆದಿದ್ದ ಎರಡು ಎಂ.ಎಸ್ಸಿ. ಪದವಿಯನ್ನೂ ಅವರು ಹಿಂದಿರುಗಿಸಿದ್ದಾರೆ.
ಪದವಿ ಹಿಂದಿರುಗಿಸಿ ಬರೆದಿದ್ದ ಪತ್ರವನ್ನು ಹಂಚಿಕೊಂಡಿರುವ ಪಾಂಡೆ, ‘ಇಸ್ರೇಲ್–ಪ್ಯಾಲೆಸ್ಟೀನ್ ನಡುವಿನ ಸಂಘರ್ಷದಲ್ಲಿ ಅಮೆರಿಕದ ನಿಲುವು ಶೋಚನೀಯ. ಪ್ಯಾಲೆಸ್ಟೀನ್‌ಗೆ ಸ್ವತಂತ್ರ ರಾಷ್ಟ್ರದ ಸ್ಥಾನಮಾನ ನೀಡುವ ಕುರಿತ ವಿವಾದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಮತ್ತು ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸುವಲ್ಲಿ ಮಧ್ಯಸ್ಥಿಕೆಗಾರನ ಪಾತ್ರ ವಹಿಸಬೇಕಿತ್ತು. ಆದರೆ ಇಸ್ರೇಲ್ ಅನ್ನು ಕುರುಡಾಗಿ ಬೆಂಬಲಿಸಿದ ಪರಿಣಾಮ ಪ್ಯಾಲೆಸ್ಟೀನ್‌ನ ಸಾವಿರಾರು ಮುಗ್ದ ನಾಗರಿಕರು ಮತ್ತು ಮಕ್ಕಳು ಅಸುನೀಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಅಮೆರಿಕ ನಿಜಕ್ಕೂ ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳ ಪರವಾದ ನಿಲುವು ಹೊಂದಿದೆ ಎಂಬುದನ್ನು ನಂಬುವುದೇ ಕಷ್ಟವಾಗಿದೆ’ ಎಂದಿರುವ ಪಾಂಡೇ, ಕ್ಯಾಲಿಫೋರ್ನಿಯಾ, ಬಾರ್ಕ್ಲೇ ಹಾಗೂ ಸೈರಾಕುಸ್ ವಿಶ್ವವಿದ್ಯಾಲಯಗಳ ದಾಖಲಾತಿಯಲ್ಲಿ ಇರುವ ನನ್ನ ಹೆಸರನ್ನು ತೆಗೆದುಹಾಕಬೇಕು’ ಎಂದು ತಮ್ಮ ಪತ್ರದಲ್ಲಿ ಕೋರಿದ್ದಾರೆ.
ಗಾಜಾ ಮೇಲಿನ ಇಸ್ರೇಲ್ ದಾಳಿಯಿಂದಾಗಿ ಈವರೆಗೂ ಸುಮಾರು 32 ಸಾವಿರ ಜನ ಮೃತಪಟ್ಟಿದ್ದಾರೆ ಎಂದು ದಾಖಲೆ ಹೇಳುತ್ತದೆ.
ಹಮಾಸ್ ಉಗ್ರರ ವಿರುದ್ಧ ಗಾಜಾ ಪಟ್ಟಿ ಮೇಲಿನ ಇಸ್ರೇಲ್ ನಡೆಸುತ್ತಿರುವ ಕದನಕ್ಕೆ ವಿರಾಮ ನೀಡಬೇಕು ಎಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸೋಮವಾರ ಪ್ರಕಟಿಸಿದೆ. ಆದರೆ ಇದಕ್ಕೆ ವಿಟೋ ಮಾಡುವ ಕ್ರಮದಿಂದ ಅಮೆರಿಕ ದೂರ ಉಳಿಯಿತು.
ಗಾಜಾದಲ್ಲಿರುವ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರ್ಣಯದಲ್ಲಿ ಹೇಳಲಾಗಿದೆ. ಆದರೆ ಅದಕ್ಕೆ ಕದನ ವಿರಾಮದ ಷರತ್ತನ್ನು ವಿಧಿಸಿಲ್ಲ. ಆದರೆ ಕದನ ವಿರಾಮಕ್ಕೆ ಈ ಹಿಂದೆ ಕರೆ ನೀಡಿದ್ದ ವಿಶ್ವ ಸಂಸ್ಥೆಯ ನಿರ್ಣಯಕ್ಕೆ ಅಮೆರಿಕಾ ವಿಟೋ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.