ನವದೆಹಲಿ: ಸಂವಿಧಾನದ 6ನೇ ಪರಿಚ್ಛೇದಕ್ಕೆ ಲಡಾಖ್ ಸೇರಿಸುವಂತೆ ಒತ್ತಾಯಿಸಿ ಲೇಹ್‌ನಿಂದ ಪಾದಯಾತ್ರೆ ಮೂಲಕ ದೆಹಲಿ ತಲುಪಿದ್ದ ಖ್ಯಾತ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ವಾಂಗ್ಚುಕ್ ಅವರೊಂದಿಗೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಸುಮಾರು 120 ಜನರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಾಂಗ್ಚುಕ್ ಅವರು ‘ದೆಹಲಿ ಚಲೋ ಪಾದಯಾತ್ರೆ’ಯನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಿದ್ದರು. ಗಾಂಧಿ ಜಯಂತಿ ದಿನದಂದು ದೆಹಲಿಯನ್ನು ತಲುಪಿ, ಶಾಂತಿಯುತ ಪ್ರತಿಭಟನೆ ನಡೆಸಬೇಕು ಎಂದು ಉದ್ದೇಶಿಸಿದ್ದರು.
ತಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಕ್ಕಾಗಿ ವಾಂಗ್ಚುಕ್ ಸೇರಿದಂತೆ ವಶದಲ್ಲಿರುವ ಹೋರಾಟಗಾರರು ಠಾಣೆಯಲ್ಲಿಯೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಪಾದಯಾತ್ರೆಯನ್ನು ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಹಾಗೂ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಸಂಸ್ಥೆಗಳು ಆಯೋಜಿಸಿದ್ದವು.
ಪ್ರತಿಭಟನಕಾರರಲ್ಲಿ 30 ಮಹಿಳೆಯರಿದ್ದರು. ಇವರನ್ನೂ ವಶಕ್ಕೆ ಪಡೆಯಲಾಗಿದೆ. ಪುರುಷ ಪ್ರತಿಭಟನಕಾರರ ಜೊತೆಯಲ್ಲಿಯೇ ಮಹಿಳೆಯರನ್ನೂ ಠಾಣೆಯಲ್ಲಿ ಇರಿಸಿಕೊಳ್ಳಲಾಗಿದೆಮೊಹಮ್ಮದ್ ಹನೀಫಾ ಲಡಾಖ್ ಸಂಸದ
ದೆಹಲಿಯಲ್ಲಿ ಲಡಾಖ್ ಭವನ ಹಾಗೂ ಲಡಾಖ್ ವಿದ್ಯಾರ್ಥಿಗಳು ನೆಲಸಿರುವ ಪ್ರದೇಶಗಳಲ್ಲೂ ಭಾರಿ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ನಮಗೆ ತಿಳಿದುಬಂದಿದೆಸೋನಮ್ ವಾಂಗ್ಚುಕ್ ಪರಿಸರ ಹೋರಾಟಗಾರ
ರೈತರನ್ನು ನಡೆಸಿಕೊಂಡ ಹಾಗೆಯೇ ಇವರನ್ನು ನಡೆಸಿಕೊಳ್ಳಲಾಗುತ್ತಿದೆ. ಪ್ರತಿಭಟನಕಾರರೊಂದಿಗೆ ಮಾತನಾಡುವ ಬದಲು ಅವರನ್ನು ವಶಕ್ಕೆ ಪಡೆಯಲಾಗಿದೆ. ವಾಂಗ್ಚುಕ್ ಅವರನ್ನು ಬೆಂಬಲಸಿ ಒಂದು ದಿನ ಉಪವಾಸ ಮಾಡುತ್ತೇನೆಮೇಧಾ ಪಾಟ್ಕರ್ ಪರಿಸರ ಹೋರಾಟಗಾರ್ತಿ
ದೆಹಲಿಗೆ ಬರುತ್ತಿದ್ದ ಶಾಂತಿಯುತ ಪಾದಯಾತ್ರೆಯನ್ನು ತಡೆಯುವುದರಿಂದ ಬಿಜೆಪಿ ಸರ್ಕಾರವು ಏನನ್ನೂ ಸಾಧಿಸುವುದಿಲ್ಲ. ನಮ್ಮ ಗಡಿ ಪ್ರದೇಶಕ್ಕೆ ಕೇಂದ್ರವು ಕಿವಿಯಾಗುವುದಿಲ್ಲ ಎನ್ನುವುದು ರಾಜಕೀಯ ಕಿವುಡುತನಅಖಿಲೇಶ್ ಯಾದವ್ ಸಂಸದ ಎಸ್‌ಪಿ ಮುಖ್ಯಸ್ಥ
ಮೋದಿ ಅವರೇ ರೈತರ ವಿಷಯದಲ್ಲಿ ಆದಂತೆಯೇ ಈ ‘ಚಕ್ರವ್ಯೂಹ’ವು ಒಡೆದು ಹೋಗುತ್ತದೆ. ಇದರೊಂದಿಗೆ ನಿಮ್ಮ ಅಹಂಕಾರ ಕೂಡ. ಲಡಾಖ್‌ನ ದನಿಗೆ ಕಿವಿಯಾಗಿರಾಹುಲ್ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ
ನನಗೆ ಪಾದಯಾತ್ರೆ ಕುರಿತು ಮಾಹಿತಿ ಇಲ್ಲ. ಆದರೆ ಕೋಲ್ಕತ್ತದಲ್ಲಿ ವ್ಯಂಗ್ಯಚಿತ್ರಕಾರರನ್ನು ತಮಿಳುನಾಡಿನಲ್ಲಿ ಹಾಸ್ಯಕಲಾವಿದನನ್ನು ಬಂಧಿಸಿದಾಗ ರಾಹುಲ್ ಗಾಂಧಿ ಮೌನವಹಿಸಿದ್ದರು. ವಾಂಗ್ಚುಕ್‌ಗೆ ನೀಡುತ್ತಿರುವ ಬೆಂಬಲವು ಕಾಂಗ್ರೆಸ್‌ನ ಬೂಟಾಟಿಕೆಯಷ್ಟೆರವಿಶಂಕರ್ ಪ್ರಸಾದ್ ಬಿಜೆಪಿ ವಕ್ತಾರ
2019ರಲ್ಲಿ ಲಡಾಖ್‌ನ ವಿಶೇಷ ಸ್ಥಾನಮಾನ ರದ್ದಾಗಿದ್ದರಿಂದ ಅಲ್ಲಿನ ಹೊರರಾಜ್ಯದ ಮಂದಿ ಲಡಾಖ್‌ನಲ್ಲಿ ಜಮೀನು ಖರೀದಿಸಲು ಮತ್ತು ಸರ್ಕಾರಿ ನೇಮಕಾತಿಯಲ್ಲಿ ಭಾಗವಹಿಸಲು ಸಾಧ್ಯವಾಯಿತು. ಜೊತೆಗೆ ಪ್ರಬಲ ಉದ್ಯಮಿಗಳು ಭೂಮಿ ಖರೀದಿಸಿ ಗಣಿಗಾರಿಕೆ ಮತ್ತು ಕಾರ್ಖಾನೆ ಆರಂಭಿಸಲು ಕೇಂದ್ರ ಸರ್ಕಾರ ಅವಕಾಶ ಕೊಟ್ಟಿತು. ಲಡಾಖ್ ಭಾರತ ಮಾತ್ರವಲ್ಲ ಜಗತ್ತಿನ ಕೆಲವೇ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಒಂದು. ಗಣಿಗಾರಿಕೆ ಸರ್ವಋತು ಹೆದ್ದಾರಿ ನಿರ್ಮಾಣದಂತಹ ಕಾಮಗಾರಿಗಳಿಂದ ಅಲ್ಲಿನ ಪರಿಸರಕ್ಕೆ ತೀವ್ರ ಹಾನಿಯಾಗುತ್ತಿದೆ. ಇದಕ್ಕಾಗಿಯೂ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ವಿಶೇಷ ಸ್ಥಾನ ರದ್ದಾಗುವುದರ ಜತೆಗೆ ಲೆಹ್ ಮತ್ತು ಕಾರ್ಗಿಲ್ ಜಿಲ್ಲಾ ಮಂಡಳಿಗಳಿಗೆ ಇದ್ದ ಅಧಿಕಾರಗಳನ್ನು ಕೇಂದ್ರ ಸರ್ಕಾರವು ಮೊಟಕುಗೊಳಿಸಿತು. ಈ ಮಂಡಳಿಗಳು ಭೂಮಿಯ ಹಕ್ಕು ನಿರ್ಧಾರ ಉದ್ಯಮ–ಕೈಗಾರಿಕೆಗಳಿಗೆ ಭೂಮಿ ಹಂಚಿಕೆಯ ಅಧಿಕಾರವನ್ನು ಹೊಂದಿದ್ದವು. ಈಗ ಆ ಅಧಿಕಾರವನ್ನು ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳಿಗೆ ನೀಡಲಾಗಿದೆ. ಇದು ಸಹ ಅಲ್ಲಿನ ಜನರಲ್ಲಿ ಅತಂತ್ರ ಭಾವವನ್ನು ಮೂಡಿಸಿದೆ. ಈ ಅಧಿಕಾರಗಳನ್ನು ಮರಳಿ ಪಡೆಯಬೇಕು ಎಂಬುದೂ ಈ ಹೋರಾಟದ ಮತ್ತೊಂದು ಆಗ್ರಹ.
ವಾಂಗ್ಚುಕ್ ಅವರನ್ನು ವಶಕ್ಕೆ ಪಡೆದಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲು. ಅ.3ಕ್ಕೆ ವಿಚಾರಣೆ ಇದೆ.
ವಾಂಗ್ಚುಕ್ ಅವರನ್ನು ಭೇಟಿ ಮಾಡಲು ತೆರಳಿದ್ದ ದೆಹಲಿ ಮುಖ್ಯಮಂತ್ರಿ ಆತಿಶಿ ಅವರನ್ನು ತಡೆದ ಪೊಲೀಸರು.
ಒಟ್ಟು 150 ಪಾದಯಾತ್ರಿಗಳು ದೆಹಲಿ ಗಡಿ ತಲುಪಿದ್ದರು, ನಿವೃತ್ತ ಯೋಧರು, 80 ವರ್ಷ ಮೇಲ್ಪಟ್ಟವರೂ ಸೇರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.