ನವದೆಹಲಿ: ಸಂವಿಧಾನದ ಆರನೇ ಪರಿಚ್ಛೇದಕ್ಕೆ ಲಡಾಖ್ ಅನ್ನು ಸೇರಿಸುವಂತೆ ಆಗ್ರಹಿಸಿ ದೆಹಲಿಗೆ ತೆರಳುತ್ತಿದ್ದ ವೇಳೆ ಬಂಧನಕ್ಕೊಳಗಾಗಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್, ತಮ್ಮನ್ನು ಇರಿಸಿರುವ ಪೊಲೀಸ್ ಠಾಣೆಯಲ್ಲಿಯೇ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ.
ಒಂದು ತಿಂಗಳ ಹಿಂದೆ ವಾಂಗ್‌ಚುಕ್ ನೇತೃತ್ವದಲ್ಲಿ ಲೇಹ್‌ನಿಂದ ಆರಂಭವಾದ 'ದೆಹಲಿ ಚಲೋ ಪಾದಯಾತ್ರೆ' ಸೋಮವಾರ ರಾತ್ರಿ ದೆಹಲಿ ಗಡಿ ತಲುಪಿತ್ತು. ಈ ವೇಳೆ ವಾಂಗ್‌ಚುಕ್ ಮತ್ತು ಅವರೊಂದಿಗೆ ಬಂದ ಲಡಾಖ್‌ನ 120 ಜನರನ್ನು ಪೊಲೀಸರು ಬಂಧಿಸಿದ್ದರು.
‘ನಿಷೇಧಾಜ್ಞೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಾಂಗ್‌ಚುಕ್ ಮತ್ತು ಅವರೊಂದಿಗೆ ಬಂದವರನ್ನು ದೆಹಲಿ ಗಡಿಯಲ್ಲಿ ಬಂಧಿಸಲಾಯಿತು. ಬವಾನಾ, ನರೇಲಾ ಇಂಡಸ್ಟ್ರಿಯಲ್ ಏರಿಯಾ ಮತ್ತು ಅಲಿಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಂಗ್‌ಚುಕ್ ಅವರನ್ನು ಬವಾನಾ ಪೊಲೀಸ್ ಠಾಣೆಗೆ ಕರೆದ್ಯೊಯಲಾಗಿದ್ದು, ಅವರ ವಕೀಲರನ್ನು ಭೇಟಿ ಮಾಡುವ ಅವಕಾಶವನ್ನು ನಿರಾಕರಿಸಲಾಗಿದೆ. ವಾಂಗ್‌ಚುಕ್ ಮತ್ತು ಇತರ ಕಾರ್ಯಕರ್ತರು ಅವರನ್ನು ಇರಿಸಲಾಗಿರುವ ಪೊಲೀಸ್ ಠಾಣೆಗಳಲ್ಲಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ ಎಂದು ಗುಂಪಿನ ಸದಸ್ಯರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.