ADVERTISEMENT

ಮಧ್ಯರಾತ್ರಿ ನಾಟಕೀಯ ಬೆಳವಣಿಗೆ: ವಕೀಲೆ ಸುಧಾ ಭಾರದ್ವಾಜ್ ಬಂಧನಕ್ಕೆ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2018, 2:19 IST
Last Updated 29 ಆಗಸ್ಟ್ 2018, 2:19 IST
ಫರೀದಾಬಾದ್ ನಿವಾಸದಲ್ಲಿ ಮಂಗಳವಾರ ಬೆಳಿಗ್ಗೆ ಸುಧಾ ಭಾರದ್ವಾಜ್ ಅವರ್ನು ಪುಣೆ ಪೊಲೀಸರು ಬಂಧಿಸಿದ್ದರು.
ಫರೀದಾಬಾದ್ ನಿವಾಸದಲ್ಲಿ ಮಂಗಳವಾರ ಬೆಳಿಗ್ಗೆ ಸುಧಾ ಭಾರದ್ವಾಜ್ ಅವರ್ನು ಪುಣೆ ಪೊಲೀಸರು ಬಂಧಿಸಿದ್ದರು.   

ನವದೆಹಲಿ: ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಕೀಲೆ ಸುಧಾ ಭಾರದ್ವಾಜ್ ಅವರನ್ನು ಆಗಸ್ಟ್ 30ರವರೆಗೆ ದೆಹಲಿಯ ಬಾದರ್‌ಪುರ್ ನಿವಾಸದಲ್ಲಿ ಗೃಹಬಂಧನದಲ್ಲಿ ಇರಿಸಲು ಫರೀದಬಾದ್ ನ್ಯಾಯಾಲಯ ಸೂರಜ್‌ಕುಂಡ್ ಪೊಲೀಸರಿಗೆ ಬುಧವಾರ ಮಧ್ಯರಾತ್ರಿ 1.30ಕ್ಕೆ ನಿರ್ದೇಶನ ನೀಡಿದೆ. ಮಹಾರಾಷ್ಟ್ರದ ಭೀಮಾ ಕೊರೆಗಾಂವ್‌ನಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸಿದ್ದ ಹಿಂಸಾಚಾರ ಕೃತ್ಯಗಳ ಹಿನ್ನೆಲೆಯಲ್ಲಿ ಮಂಗಳವಾರ ಸುಧಾ ಅವರನ್ನು ಪುಣೆ ಪೊಲೀಸರು ವಶಕ್ಕೆ ಪಡೆದಿದ್ದರು.

ಸುಧಾ ಅವರ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆಯಲ್ಲಿ, ಅವರ ಪರ ವಕೀಲರು ತಕ್ಷಣ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೊರೆ ಹೋದರು. ಬುಧವಾರ ಮಧ್ಯರಾತ್ರಿ 2 ಗಂಟೆಯವರೆಗೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿತ್ತು. ‘ಹೈಕೋರ್ಟ್‌ನ ಮುಂದಿನ ಆದೇಶದವರೆಗೂ ಸುಧಾ ಭಾರದ್ವಾಜ್ ಅವರನ್ನು ಸೂರಜ್‌ಕುಂಡ್ ಪೊಲೀಸರ ನಿಗಾವಣೆಯಲ್ಲಿ ಗೃಹಬಂಧನದಲ್ಲಿ ಇರಿಸಬೇಕು’ ಎನ್ನುವ ಹೈಕೋರ್ಟ್ ಆದೇಶವನ್ನೇ ಫರೀದಾಬಾದ್‌ನ ಮುಖ್ಯ ನ್ಯಾಯಿಕ ದಂಡಾಧಿಕಾರಿ (ಸಿಜೆಎಂ) ಅಶೋಕ್‌ ಕುಮಾರ್ ಅವರು ಪುನರುಚ್ಚರಿಸಿ, ನಿರ್ದೇಶನ ನೀಡುವುದರೊಂದಿಗೆ ಪ್ರಕರಣ ಒಂದು ಹಂತಕ್ಕೆ ಬಂತು.

ಸುಧಾ ಅವರ ಬಂಧನ ಆದೇಶಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಆಗಸ್ಟ್ 30ರವರೆಗೆ ತಡೆಯಾಜ್ಞೆ ನೀಡಿದ್ದರೂ, ಈ ಮೊದಲುಸುಧಾ ಅವರನ್ನು ಬಂಧಿಸಿ ಕರೆದೊಯ್ಯಲು ಮಹಾರಾಷ್ಟ್ರ ಪೊಲೀಸರಿಗೆ ಸಿಜೆಎಂ ಅವಕಾಶ ಕೊಟ್ಟಿದ್ದರು. ಬಂಧನದ ನಂತರ ತಮ್ಮ ವಕೀಲರಿಗೆ ಮಾಹಿತಿ ನೀಡಿದ್ದ ಸುಧಾ ಭಾರದ್ವಾಜ್, ಮಂಗಳವಾರ ಮಧ್ಯರಾತ್ರಿ ಪೊಲೀಸರು ನನ್ನನ್ನು ನೇರವಾಗಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಸುಧಾ ಅವರನ್ನು ಎಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ನೀಡಲು ಪುಣೆ ಪೊಲೀಸರು ನಿರಾಕರಿಸಿದ್ದರು.ಸುಧಾ ಭಾರದ್ವಾಜ್ ಅವರನ್ನು ಚಾರ್ಮ್‌ವುಡ್ ಗ್ರಾಮದ ಮಗಳ ಮನೆಯಿಂದ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಮಹಾರಾಷ್ಟ್ರದಿಂದ ಬಂದಿದ್ದ 10 ಜನರಿದ್ದ ಪೊಲೀಸರ ತಂಡ ಬಂಧಿಸಿತ್ತು.

ADVERTISEMENT

ಸಿಜೆಎಂ ಮನೆಯ ಸಮೀಪ ನಿಲ್ಲಿಸಿದ್ದ ಇನ್ನೋವಾ ಕಾರಿನಲ್ಲಿರಾತ್ರಿ ಕತ್ತಲಿನಲ್ಲಿ ಸುಧಾ ಇರುವುದಾಗಿ ವಕೀಲರಿಗೆ ಮಾಹಿತಿ ಸಿಕ್ಕಿತ್ತು. ಹೈಕೋರ್ಟ್‌ ಆದೇಶವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸುಧಾ ಅವರ ಬಂಧನಕ್ಕೆ ಸಿಜೆಎಂ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ವಕೀಲರು ಆರೋಪಿಸಿದ್ದರು.ರಾತ್ರಿ 1.30ಕ್ಕೆ ಮರು ಆದೇಶ ಹೊರಡಿಸಿದ ಸಿಜೆಎಂ, ‘ಪ್ರಕರಣ ವಿಚಾರಣೆಯು ಹೈಕೋರ್ಟ್‌ನಲ್ಲಿ ಬಾಕಿ ಇದೆ. ಹೀಗಾಗ ಮಂಗಳವಾರ ಬೆಳಿಗ್ಗೆ 7.40ಕ್ಕೆ ಕೊಟ್ಟಿದ್ದ ಬಂಧನ ಆದೇಶವನ್ನು ಹಿಂಪಡೆಯುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ಮಹರ್ ಮತ್ತು ಮರಾಠ ಜನಾಂಗಕ್ಕೆ ಸೇರಿದವರ ನಡುವೆ ಕಳೆದ ಡಿಸೆಂಬರ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಮಂಗಳವಾರ ದೆಹಲಿ, ಫರೀದಾಬಾದ್, ಗೋವಾ, ಮುಂಬೈ, ರಾಂಚಿ ಮತ್ತು ಹೈದರಾಬಾದ್‌ ನಗರಗಳಲ್ಲಿ ದಾಳಿ ನಡೆಸಿ ವರವರರಾವ್, ಸುಧಾ ಭಾರದ್ವಾಜ್, ಅರುಣ ಫೆರೆರಾ, ಗೌತಮ್ ನವಲಖಾ ವೆರ್ನಾನ್ ಗೊಂಜಾವಲ್ ಅವರನ್ನು ಬಂಧಿಸಿದ್ದರು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.