ADVERTISEMENT

ಅಯ್ಯಪ್ಪ ದರ್ಶನ: ತೃಪ್ತಿ ದೇಸಾಯಿ ಯತ್ನ ವಿಫಲ

ಪಿಟಿಐ
Published 16 ನವೆಂಬರ್ 2018, 15:59 IST
Last Updated 16 ನವೆಂಬರ್ 2018, 15:59 IST
   

ಕೊಚ್ಚಿ:ಶಬರಿಮಲೆ ದೇವಾಲಯ ಪ್ರವೇಶಿಸುವ ಸಲುವಾಗಿ ಪುಣೆಯಿಂದ ಇಲ್ಲಿಗೆ ಬಂದಿದ್ದ ಭೂಮಾತಾ ಬ್ರಿಗೇಡ್‌ನ ತೃಪ್ತಿ ದೇಸಾಯಿ ಮತ್ತು ತಂಡವು ಭಕ್ತಾದಿಗಳಿಂದ ತೀವ್ರ ಪ್ರತಿಭಟನೆ ಎದುರಾದ ಕಾರಣ ವಾಪಸ್ ಆಗಲು ನಿರ್ಧರಿಸಿದೆ. ದೇವಾಲಯ ಪ್ರವೇಶ ಯೋಜನೆಯನ್ನು ರದ್ದುಪಡಿಸಿದೆ.

62 ದಿನಗಳ ಮಂಡಳ ಪೂಜೆ ಮತ್ತು ವ್ರತಾಚರಣೆಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯದ ಬಾಗಿಲನ್ನು ಶುಕ್ರವಾರ ಸಂಜೆ 5ಕ್ಕೆ ತೆರೆಯಲಾಗಿದೆ. ದೇವಾಲಯವನ್ನು ಪ್ರವೇಶಿಸುವ ಸಲುವಾಗಿ ತೃಪ್ತಿ ದೇಸಾಯಿ ಮತ್ತು ಅವರ ತಂಡವು ಶುಕ್ರವಾರ ಬೆಳಿಗ್ಗೆ 4.30ಕ್ಕೇ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು.

ಆದರೆ ಅಷ್ಟರಲ್ಲಾಗಲೇ ನೂರಾರು ಭಕ್ತಾದಿಗಳು ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ತೃಪ್ತಿ ಅವರ ತಂಡವು ವಿಮಾನ ನಿಲ್ದಾಣದಿಂದ ಹೊರಬಾರದಂತೆ ತಡೆದರು.

ADVERTISEMENT

ತೃಪ್ತಿ ಅವರ ತಂಡವು ಕೊಚ್ಚಿಯಲ್ಲಿ ಉಳಿದುಕೊಳ್ಳಲು ಯಾವುದೇ ಹೋಟೆಲ್‌ನಲ್ಲಿ ಕೊಠಡಿಯನ್ನು ಕಾಯ್ದಿರಿಸಿರಲಿಲ್ಲ. ಅಲ್ಲದೆ ಅವರಿಗೆ ಕೊಠಡಿ ನೀಡಲು ಎಲ್ಲ ಹೋಟೆಲ್‌ಗಳೂ ನಿರಾಕರಿಸಿದವು ಎಂದು ಮೂಲಗಳು ಹೇಳಿವೆ.

‘ತೃಪ್ತಿ ಅವರು ಹೋಟೆಲ್ ಕೊಠಡಿ ಕಾಯ್ದಿರಿಸಿಲ್ಲ. ಅವರಿಗೆ ಕೊಠಡಿ ಕೊಡಿಸುವ ಕೆಲಸ ನಮ್ಮದಲ್ಲ. ಅವರು ಕೊಠಡಿ ಕಾಯ್ದಿರಿಸಿದರೆ ವಿಮಾನ ನಿಲ್ದಾಣದಿಂದ ಅಲ್ಲಿಗೆ ಸುರಕ್ಷಿತವಾಗಿ ಕರೆದೊಯ್ಯುತ್ತೇವೆ’ ಎಂದು ಪೊಲೀಸರು ತಿಳಿಸಿದರು.

ವಿಮಾನ ನಿಲ್ದಾಣದಿಂದ 190 ಕಿ.ಮೀ. ದೂರದಲ್ಲಿರುವ ಪಂಬಾಗೆ (ಶಬರಿಮಲೆ ಚಾರಣ ಆರಂಭ ಸ್ಥಳ) ಕರೆದೊಯ್ಯಲು ಯಾವುದೇ ಟ್ಯಾಕ್ಸಿ ಚಾಲಕರೂ ಮುಂದೆ ಬರಲಿಲ್ಲ. ಆನ್‌ಲೈನ್ ಕ್ಯಾಬ್ ಚಾಲಕರೂ ಸೇವೆಯನ್ನು ಸ್ಥಗಿತಗೊಳಿಸಿದರು.ಪೊಲೀಸರು ತಮ್ಮ ವಾಹನದಲ್ಲಿ ತೃಪ್ತಿ ಅವರ ತಂಡವನ್ನು ಕರೆದೊಯ್ಯಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಂಜೆವರೆಗೆ ಕಾದರೂ ತಂಡವು ವಿಮಾನ ನಿಲ್ದಾಣದಿಂದ ಹೊರಡಲು ಸಾಧ್ಯವಾಗಲೇ ಇಲ್ಲ.

ಹೀಗಾಗಿ ದೇವಾಲಯ ಪ್ರವೇಶಿಸುವ ತಮ್ಮ ಯೋಜನೆಯನ್ನು ರದ್ದುಪಡಿಸಿ ಪುಣೆಗೆ ವಾಪಸ್ ಆಗಲು ಭೂಮಾತಾ ಬ್ರಿಗೇಡ್‌ನ ಸದಸ್ಯರು ನಿರ್ಧರಿಸಿದರು.

‘ಪುಣೆಗೆ ವಾಪಸ್ ತೆರಳುವಂತೆ ಪೊಲೀಸರು ಮನವಿ ಮಾಡಿಕೊಂಡರು. ಮುಂದಿನ ಬಾರಿ ಬಂದಾಗ ಸೂಕ್ತ ರಕ್ಷಣೆ ನೀಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ’ ಎಂದು ತೃಪ್ತಿ ದೇಸಾಯಿ ಅವರು ಸಂಜೆ 7ರ ಹೊತ್ತಿಗೆ ಹೇಳಿಕೆ ನೀಡಿದರು.

ಶುಕ್ರವಾರ ದೇವಾಲಯ ತೆರೆದ ಹಿನ್ನೆಲೆಯಲ್ಲಿ ತೃಪ್ತಿ ದೇಸಾಯಿ ಕೊಚ್ಚಿಗೆ ಆಗಮಿಸಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದ ಮುಂದೆಸಾವಿರಾರು ಜನ ಸಾರ್ವಜನಿಕರು ಮತ್ತು ಅಯ್ಯಪ್ಪ ಭಕ್ತರ ಪ್ರತಿಭಟನೆ ನಡೆಸಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೂ ವಿಮಾನ ನಿಲ್ದಾಣದಲ್ಲೇ ಇದ್ದರು. ಟ್ಯಾಕ್ಸಿ ಚಾಲಕರು ತೃಪ್ತಿಯನ್ನು ಕರೆತರಲು ನಿರಾಕರಿಸಿದ್ದರು.

ವಿಮಾನ ನಿಲ್ದಾಣದಿಂದ ಹೊರ ಬಂದರೆ ತಡೆಯುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದರು. ನಿಲ್ದಾಣದ ಸುತ್ತ ಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಕಾನೂನು ಸುವ್ಯವಸ್ಥೆ ಹದಗೆಡುವ ಹಿನ್ನೆಲೆಯಲ್ಲಿ ಪುಣೆಗೆ ಮರಳುವಂತೆ ಪೊಲೀಸರು ಮನವಿ ಮಾಡಿದ್ದರು, ಮುಂದಿನ ಸಲ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದಾಗಿ ಅವರು ತಿಳಿಸಿದ್ದಾರೆ. ನಮ್ಮ ತಂಡದ ಸದಸ್ಯರ ಜತೆ ಚರ್ಚಿಸಿ ಪುಣೆಗೆ ಮರಳುವ ನಿರ್ಧಾರ ಮಾಡಲಾಗಿದೆ ಎಂದು ತೃಪ್ತಿ ದೇಸಾಯಿ ಖಾಸಗಿ ಸುದ್ದಿ ವಾಹಿನಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಆರು ಜನ ಮಹಿಳೆಯರ ಜತೆ ತೃಪ್ತಿ ದೇಸಾಯಿ ಬೆಳಗ್ಗೆ ಕೊಚ್ಚಿಗೆ ವಿಮಾನದ ಮೂಲಕ ಆಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.