ಚೆನ್ನೈ: 1991ರಲ್ಲಿ ತೆರೆಕಂಡ ಚಿತ್ರ ಕ್ಯಾಪ್ಟನ್ ಪ್ರಭಾಕರನ್. ಆ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದ ನಾಯಕ ನಟ ವಿಜಯಕಾಂತ್, ತಮ್ಮ ಅಂತಿಮ ದಿನದವರೆಗೂ ಅಭಿಮಾನಿಗಳ ಪಾಲಿನ ‘ಕ್ಯಾಪ್ಟನ್’ ಆಗಿ ಬದುಕಿದವರು. ತಮಿಳುನಾಡು ರಾಜಕೀಯದಲ್ಲಿ ಎಂ.ಕರುಣಾನಿಧಿ ಹಾಗೂ ಜೆ.ಜಯಲಲಿತಾ ಅವರು ಅತ್ಯಂತ ಪ್ರಭಾವಿಗಳಾಗಿರುವಾಗಲೇ ಸಿನಿಮಾದಿಂದ ರಾಜಕೀಯಕ್ಕೆ ಧುಮುಕಿದ ದಿಟ್ಟ ಹೋರಾಟಗಾರ ವಿಜಯಕಾಂತ್ ಅವರು ತಮ್ಮ ಇಹಲೋಕ ಯಾತ್ರೆಯನ್ನು ಗುರುವಾರ ಪೂರ್ಣಗೊಳಿಸಿದ್ದಾರೆ.
ಶ್ರಮಿಕ ವರ್ಗದ ನಾಯಕ ಎಂದೇ ಬಿಂಬಿತವಾಗಿದ್ದ ವಿಜಯಕಾಂತ್ ಅವರು ನಟಿಸಿದ ಬಹುತೇಕ ಚಿತ್ರಗಳಲ್ಲಿ ಪೊಲೀಸ್ ಪಾತ್ರವೇ ಪ್ರಮುಖವಾಗಿತ್ತು. ಸ್ಥಳೀಯ ಗೂಂಡಾಗಳಿಗೆ ಬಿಸಿ ಮುಟ್ಟಿಸುತ್ತಿದ್ದ ಕ್ಯಾಪ್ಟನ್, ಕೆಲವೊಮ್ಮೆ ಅಂತರರಾಷ್ಟ್ರೀಯ ಮಟ್ಟದ ಭಯೋತ್ಪಾದಕರನ್ನೂ ಹೆಡೆಮುರಿ ಕಟ್ಟಿದ ಸನ್ನಿವೇಶಗಳು ಪ್ರೇಕ್ಷಕರನ್ನು ಅವರ ಅಭಿಮಾನಿಗಳನ್ನಾಗಿ ಪರಿವರ್ತಿಸಿದವು.
ಮಹಿಳೆಯರ ಪಾಲಿನ ಮೆಚ್ಚಿನ ಮಗ, ಅಣ್ಣ ಹಾಗೂ ಮಾದರಿ ಪತಿಯಾಗಿ ವಿಜಯಕಾಂತ್ 25 ವರ್ಷಗಳ ಕಾಲ ಸಿನಿಮಾ ಪಯಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದವರು. ಮೇರು ನಟ ಮತ್ತು ರಾಜಕಾರಣಿ ಎಂ.ಜಿ.ರಾಮಚಂದ್ರನ್ ಅವರ ಅನುಯಾಯಿಯಾಗಿದ್ದರು ವಿಜಯಕಾಂತ್. ಸಿನಿಮಾ ಸೆಟ್‌ನಲ್ಲಿರುವಾಗಲೂ ತಾವು ಸೇವಿಸುವ ಆಹಾರವನ್ನೇ ತಮ್ಮ ಇಡೀ ಚಿತ್ರತಂಡಕ್ಕೆ ಉಣಬಡಿಸುತ್ತಿದ್ದ ಹಾಗೂ ಸಿನಿಮಾ ಕಾರ್ಮಿಕರ ಪಾಲಿಗೆ ಸದಾ ಕೊಡುಗೈ ದಾನಿಯಾಗಿದ್ದ ಅವರು ಕೊನೆಯವರೆಗೂ ಅದರಂತೆಯೇ ಬದುಕಿದವರು.
ಆದರೆ ಸಿನಿಮಾದಲ್ಲಿ ಕಂಡ ಯಶಸ್ಸು ಅವರಿಗೆ ರಾಜಕೀಯ ಜೀವನದಲ್ಲಿ ಸಿಗಲಿಲ್ಲ. ರಾಜಕೀಯ ಬದುಕಿನಲ್ಲಿ ‘ಕಪ್ಪು ಎಂಜಿಆರ್’ ಹಾಗೂ ಪುರುತಚ್ಚಿ ನಾಡಿಗರ್ (ಕ್ರಾಂತಿಕಾರಿ ನಟ) ಎಂದೇ ಕರೆಯಿಸಿಕೊಳ್ಳುತ್ತಿದ್ದರು. ‘ಬದುಕಿಗೆ ಹಣವೇ ಮುಖ್ಯವಲ್ಲ’ ಎಂಬ ಜೀವನ ಸತ್ಯವನ್ನು ತಮ್ಮ ಭಾಷಣದಲ್ಲಿ ಅವರು ಧಾರಾಳವಾಗಿ ಬಳಸುತ್ತಿದ್ದರು. ವಿಜಯಕಾಂತ್ ಮಾತುಗಳು ಯುಟ್ಯೂಬ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದದ್ದೂ ಇದೇ ಕಾರಣಕ್ಕಾಗಿ.
ರಾಜಕೀಯ ಮತ್ತು ಸಿನಿಮಾ ಜತೆ ನಿರಂತರ ಸಂಬಂಧ ಹೊಂದಿದ್ದ ಏಕೈಕ ವ್ಯಕ್ತಿ ವಿಜಯಕಾಂತ್. ತಮಿಳುನಾಡು ರಾಜಕೀಯದಲ್ಲಿ ಅತ್ಯಂತ ಪ್ರಭಾವಿಗಳಾಗಿದ್ದ ಕರುಣಾನಿಧಿ ಹಾಗೂ ಜಯಲಲಿತಾ ಅವರು ಮರೆಗೆ ಸರಿದ ನಂತರ ಹಿರಿಯ ನಟ ಕಮಲ ಹಾಸನ್ ರಾಜಕೀಯ ಪ್ರವೇಶಿಸಿದರು. ರಜನಿಕಾಂತ್ ಈಗಲೂ ತಮ್ಮ ರಾಜಕೀಯ ಪ್ರವೇಶ ಕುರಿತು ಗೊಂದಲ ಹೊಂದಿದ್ದಾರೆ. ಆದರೆ ವಿಜಯಕಾಂತ್ ರಾಜಕೀಯ ಪ್ರವೇಶಿಸಿ ಕರುಣಾನಿಧಿ ಮತ್ತು ಜಯಲಲಿತಾ ಅವರಿಗೆ ಪರ್ಯಾಯ ಶಕ್ತಿಯಾಗಿ ಬೆಳೆಯುವ ಸೂಚನೆ ನೀಡಿದ್ದರು. ಡಿಎಂಕೆ ಹಾಗೂ ಎಐಎಡಿಎಂಕೆಗೆ ಪರ್ಯಾಯ ಪಕ್ಷ ಎಂದೇ ವಿಜಯಕಾಂತ್ ಅವರ ಡಿಎಂಡಿಕೆ ಬಿಂಬಿತವಾಗಿದ್ದು ವಾಸ್ತವ.
‘ದ್ರಾವಿಡಂ’ ಎಂಬ ಪದ ಬಳಕೆಯ ಮೂಲಕ ಜನರ ನಾಡಿ ಮಿಡಿತವನ್ನು ಸರಿಯಾಗಿ ಅರಿತಿದ್ದ ವಿಜಯಕಾಂತ್, ವಿರುಧಾಚಲಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಮ್ಮ ಚೊಚ್ಚಲ ಚುನಾವಣೆಯಲ್ಲಿ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದರು. ತಮ್ಮ ಪಕ್ಷ ಮೊದಲ ಚುನಾವಣೆಯಲ್ಲೇ ಶೇ 8.5ರಷ್ಟು ಮತ ಗಳಿಸುವ ಮೂಲಕ ಡಿಎಂಡಿಕೆ ರಾಜ್ಯದಲ್ಲಿ ಭರವಸೆ ಮೂಡಿಸಿತ್ತು.
ಕೆಲವೇ ವರ್ಷಗಳಲ್ಲಿ ಎದುರಾದ ಉಪ ಚುನಾವಣೆಯಲ್ಲಿ ಮತ ಗಳಿಕೆ ಪ್ರಮಾಣ ಶೇ 10ಕ್ಕೆ ನೆಗೆಯಿತು. 2011ರಲ್ಲಿ ಎಐಎಡಿಎಂಕೆ ಜತೆಗಿನ ಮೈತ್ರಿಯಿಂದಾಗಿ ಡಿಎಂಡಿಕೆ 29 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಆ ಮೂಲಕ ದ್ರಾವಿಡ ಪಕ್ಷಗಳ ಪರ್ಯಾಯ ನಾಯಕ ಎಂದೇ ವಿಜಯಕಾಂತ್ ಬಿಂಬಿತವಾಗಿದ್ದರು. ಆದರೆ ತಮ್ಮ ಉದ್ದೇಶದಿಂದ ವಿಜಯಕಾಂತ್ ದಿನದಿಂದ ದಿನಕ್ಕೆ ದೂರ ಸರಿಯಲಾರಂಭಿಸಿದರು. ಭಾಷಣಗಳಲ್ಲಿ ಅಸಂಬದ್ಧ ಮಾತುಗಳು ಅವರಿಗೆ ದುಬಾರಿಯಾದವು. ಜಯಲಲಿತಾ ಅವರಂತೆ ಪಕ್ಷದ ಮೇಲೆ ಹಿಡಿತ ಸಾಧಿಸಲು, ಡಿಎಂಕೆ ಶಾಸಕರನ್ನು ಖರೀದಿಸಿ ಆ ಪಕ್ಷವನ್ನೇ ನೆಲ ಕಚ್ಚುವಂತೆ ಮಾಡಿದ ಜಯಲಲಿತಾ ತಂತ್ರಗಳು ವಿಜಯಕಾಂತ್ ಅವರಿಂದ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಅವರು ಪತ್ರಕರ್ತರೊಂದಿಗೆ ಸದಾ ಜಗಳ ಮಾಡುತ್ತಿದ್ದುದು ಸುದ್ದಿಯಾಗುತ್ತಲೇ ಇತ್ತು. 2016ರಲ್ಲಿ ಡಿಎಂಕೆ ಜತೆಗಿನ ಮೈತ್ರಿ ವಿಜಯಕಾಂತ್ ಅವರಿಗೆ ಅಷ್ಟೇನೂ ಲಾಭದಾಯಕವಾಗಿರಲಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದರೂ ಚುನಾವಣೆಯಲ್ಲಿ ತಮ್ಮ ಮೊದಲ ಸೋಲನ್ನು ಅವರು ಅನುಭವಿಸಿದರು. ಆಗ ಅವರ ಪಕ್ಷದ ಮತ ಗಳಿಕೆ ಪ್ರಮಾಣ ಶೇ 2.5ಕ್ಕೆ ಕುಸಿದಿತ್ತು.
ವಿಜಯಕಾಂತ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಸಾಗಿತು. ಇದನ್ನು ಅರಿತ ಪತ್ನಿ ಪ್ರೇಮಲತಾ ಹಾಗೂ ಅವರ ಸೊದರ ಎಲ್.ಕೆ.ಸುದೇಶ್ ಅವರು ಪಕ್ಷವನ್ನು ಮುನ್ನಡೆಸುವ ಹೊಣೆ ಹೊತ್ತರು. ಎಐಎಡಿಎಂಕೆ ಹಾಗೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 2019ರ ಚುನಾವಣೆ ಎದುರಿಸಿದರು.
2021ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಡಿಕೆ ಪಕ್ಷಕ್ಕೆ ಹೆಚ್ಚಿನ ಕ್ಷೇತ್ರಗಳನ್ನು ಬಿಟ್ಟುಕೊಡಲು ಎಐಎಡಿಎಂಕೆ ನಿರಾಕರಿಸಿತು. ಜತೆಗೆ ಮೈತ್ರಿಯಿಂದ ಹೊರನಡೆಯುವಂತೆಯೂ ಸೂಚಿಸಿತು. ಆ ಚುನಾವಣೆಯಲ್ಲಿ ಡಿಎಂಡಿಕೆ ಮತ ಗಳಿಕೆ ಪ್ರಮಾಣ ಶೇ 0.45ಕ್ಕೆ ಕುಸಿಯಿತು.
ಇಹಲೋಕ ಯಾತ್ರೆ ಪೂರ್ಣಗೊಳಿಸಿದ ದೇಸೀಯ ಮುರ್ಪೋಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷದ ಸಂಸ್ಥಾಪಕರೂ ಆದ ವಿಜಯಕಾಂತ್ (71) ಅವರಿಗೆ ಪತ್ನಿ ಪ್ರೇಮಲತಾ (ಸದ್ಯ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ), ಪುತ್ರರಾದ ವಿಜಯ ಪ್ರಭಾಕರ್ ಹಾಗೂ ಷಣ್ಮುಗ ಪಾಂಡಿಯನ್ ಇದ್ದಾರೆ.
ಕಳೆದ ಕೆಲ ವರ್ಷಗಳಿಂದ ವಿಜಯಕಾಂತ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನ್ಯುಮೋನಿಯಾಕ್ಕೆ ತುತ್ತಾಗಿದ್ದ ಅವರನ್ನು ಡಿ. 26ರಂದು ಚೆನ್ನೈನ ಎಂಐಒಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಡಿಸೆಂಬರ್ ಆರಂಭದಲ್ಲಿ ಒಮ್ಮೆ ವಿಜಯಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಣಮುಖರಾದ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಾರಿ ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾದರು’ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ವಿಜಯಕಾಂತ್ ಅವರ ನಿಧನಕ್ಕೆ ಅಭಿಮಾನಿಗಳು, ರಾಜಕೀಯ ಮುಖಂಡರು ಕಂಬನಿ ಮಿಡಿದಿದ್ದಾರೆ. ಚೆನ್ನೈನಲ್ಲಿರುವ ಅವರ ನಿವಾಸದ ಎದುರು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.