ADVERTISEMENT

ಪ್ರವಾಹ ಪೀಡಿತ ಆಂಧ್ರ, ತೆಲಂಗಾಣಕ್ಕೆ ₹1 ಕೋಟಿ ದೇಣಿಗೆ ನೀಡಿದ ಜೂನಿಯರ್ ಎನ್‌ಟಿಆರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2024, 10:05 IST
Last Updated 3 ಸೆಪ್ಟೆಂಬರ್ 2024, 10:05 IST
ಜ್ಯೂನಿಯರ್ ಎನ್‌ಟಿಆರ್
ಜ್ಯೂನಿಯರ್ ಎನ್‌ಟಿಆರ್   

ಅಮರಾವತಿ/ಹೈದರಾಬಾದ್‌: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ತತ್ತರಿಸಿದ್ದು, ಅಪಾರ ಪ್ರಮಾಣದ ಆಸ್ತಿ–ಪಾಸ್ತಿ ನಷ್ಟವಾಗಿದೆ.

ಪ್ರವಾಹದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ₹50 ಲಕ್ಷ ದೇಣಿಗೆ ನೀಡುವುದಾಗಿ ನಟ ಜೂನಿಯರ್ ಎನ್‌ಟಿಆರ್ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ತೆಲುಗು ಭಾಷಿಕ ಎರಡು ರಾಜ್ಯಗಳಲ್ಲಿ (ಆಂಧ್ರ & ತೆಲಂಗಾಣ) ಭಾರಿ ಮಳೆಯಿಂದಾಗಿ ಸಂಭವಿಸಿದ ದಿಢೀರ್ ಪ್ರವಾಹವನ್ನು ನೋಡಿ ಮನಸ್ಸಿಗೆ ಆಘಾತ ಉಂಟುಮಾಡಿದೆ. ಎರಡು ರಾಜ್ಯಗಳ ಜನರು ಆದಷ್ಟು ಬೇಗ ಈ ವಿಪತ್ತಿನಿಂದ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ₹50 ಲಕ್ಷ ದೇಣಿಗೆಯನ್ನು ಘೋಷಿಸುತ್ತಿದ್ದೇನೆ. ಜತೆಗೆ, ಸಂತ್ರಸ್ತರ ನೆರವಿಗೆ ಧಾವಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ’ ಎಂದು ಜೂನಿಯರ್ ಎನ್‌ಟಿಆರ್ ತಿಳಿಸಿದ್ದಾರೆ.

ADVERTISEMENT

ಚಿತ್ರ ನಿರ್ಮಾಣ ಸಂಸ್ಥೆ ‘ವೈಜಯಂತಿ ಮೂವೀಸ್’ ಕೂಡ ಆಂಧ್ರ ಪ್ರದೇಶ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹25 ಲಕ್ಷ ದೇಣಿಗೆ ನೀಡುವುದಾಗಿ ಪ್ರಕಟಿಸಿದೆ.

ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹5 ಲಕ್ಷ ದೇಣಿಗೆ ನೀಡುವುದಾಗಿ ನಟ ವಿಶ್ವಕ್ ಸೇನ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಳೆ ಸಂಬಂಧ ಅವಘಡಗಳಿಂದ ಆಂಧ್ರಪ್ರದೇಶದಲ್ಲಿ 15 ಮತ್ತು ತೆಲಂಗಾಣದಲ್ಲಿ 16 ಮಂದಿ ಅಸುನೀಗಿದ್ದಾರೆ. ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡೂ ರಾಜ್ಯಗಳ ಹಲವೆಡೆ ರಸ್ತೆ ಮತ್ತು ರೈಲು ಸಂಪರ್ಕಗಳು ಕಡಿತವಾಗಿದ್ದು, ಸಹಸ್ರಾರು ಎಕರೆ ಕೃಷಿ ಪ್ರದೇಶ ಜಲಾವೃತವಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದ್ದು, ಪರಿಹಾರ ಕಾರ್ಯಗಳೂ ಸಾಗಿವೆ.

ಹಲವೆಡೆ ರೈಲ್ವೆ ಹಳಿಗಳು ಕಿತ್ತು ಹೋಗಿವೆ. ಹಳಿಗಳ ಕೆಳಗಿನ ಜಲ್ಲಿಕಲ್ಲುಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ. ಸೇತುವೆಗಳು ಕುಸಿದು ಬಿದ್ದಿವೆ. ಪ್ರಕಾಶಂ ಬ್ಯಾರೆಜ್‌ನಿಂದ ಅಪಾರ ಪ್ರಮಾಣದ ನೀರನ್ನು ಹರಿಸಲಾಗಿದೆ. ಇದು ಪ್ರವಾಹದ ತೀವ್ರತೆಯನ್ನು ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.