ADVERTISEMENT

ಡಿಎಂಕೆ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಕಮಲ್ ಹಾಸನ್ ನೇತೃತ್ವದ ‘ಮಕ್ಕಳ್ ನೀಧಿ ಮೈಯಂ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮಾರ್ಚ್ 2024, 9:08 IST
Last Updated 9 ಮಾರ್ಚ್ 2024, 9:08 IST
<div class="paragraphs"><p>ಕಮಲ್ ಹಾಸನ್ ಮತ್ತು ಎಂ.ಕೆ.ಸ್ಟಾಲಿನ್</p></div>

ಕಮಲ್ ಹಾಸನ್ ಮತ್ತು ಎಂ.ಕೆ.ಸ್ಟಾಲಿನ್

   

ಚೆನ್ನೈ: ಮುಂಬರುವ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ನಟ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಪಕ್ಷವು ಇಂದು (ಶನಿವಾರ) ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟಕ್ಕೆ (ಎಸ್‌ಪಿಎ) ಸೇರ್ಪಡೆಯಾಗಿದೆ ಎಂದು ಸುದ್ದಿಸಂಸ್ಥೆ ‘ಪಿಟಿಐ’ ವರದಿ ಮಾಡಿದೆ.

ADVERTISEMENT

2025ರ ರಾಜ್ಯಸಭಾ ಚುನಾವಣೆಯಲ್ಲಿ ಎಂಎನ್‌ಎಂ ಒಂದು ಸ್ಥಾನವನ್ನು ಪಡೆಯುವ ಕುರಿತು ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಮೈತ್ರಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಹಾಸನ್, ‘ದೇಶದ ಹಿತದೃಷ್ಟಿಯಿಂದ ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದ್ದೇನೆಯೇ ಹೊರತು ಯಾವುದೇ ಹುದ್ದೆಯನ್ನು ಬಯಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಲೋಕಸಭೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲು ಕಾಂಗ್ರೆಸ್ ಸಮಿತಿಯು ಶೀಘ್ರದಲ್ಲೇ ಡಿಎಂಕೆ ನಾಯಕರನ್ನು ಭೇಟಿಯಾಗಲಿದೆ ಎಂದು ತಿಳಿದುಬಂದಿದೆ.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ವಿಸಿಕೆ ಮತ್ತು ಎಂಡಿಎಂಕೆ ಪಕ್ಷದೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಇತ್ತೀಚೆಗೆ ಅಂತಿಮಗೊಳಿಸಿತ್ತು.

ವಿಡುಥಲೈ ಚಿರುಥೈಗಲ್ ಕಚ್ಚಿ (ವಿಸಿಕೆ) ಮುಖ್ಯಸ್ಥ ತಿರುಮವಲವಾನ್ ಮತ್ತು ಎಂಡಿಎಂಕೆ ಪಕ್ಷದ ಮುಖ್ಯಸ್ಥ ವೈಕೋ ಅವರು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಮೈತ್ರಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಮೂಲಕ 2019ರ ಲೋಕಸಭೆ ಚುನಾವಣೆಯಲ್ಲಿ ಈ ಮೂರು ಪಕ್ಷಗಳ ಮೈತ್ರಿ ಮರು ಸಾಧಿಸಿದಂತಾಗಿದೆ.

ವಿಡುಥಲೈ ಚಿರುಥೈಗಲ್ ಕಚ್ಚಿ (ವಿಸಿಕೆ) ಪಕ್ಷಕ್ಕೆ ಎರಡು ಲೋಕಸಭಾ ಮೀಸಲು ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದ್ದು, ಇನ್ನು ವೈಕೋ ನೇತೃತ್ವದ ಎಂಡಿಎಂಕೆ ಪಕ್ಷಕ್ಕೆ ಮೈತ್ರಿಯ ಪಾಲುದಾರ ಪಕ್ಷದಿಂದ ಒಂಟು ಸೀಟು ಹಂಚಿಕೆ ಮಾಡಲಾಗಿದೆ.

ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದಲ್ಲಿ ಸೆಕ್ಯೂಲರ್ ಪ್ರೊಗ್ರೆಸ್ಸಿವ್ ಅಲಯನ್ಸ್ (ಎಸ್‌ಪಿಎ) ಅನ್ನು ಮಾಡಿಕೊಳ್ಳಲಾಗಿದ್ದು, 2019ರ ಲೋಕಸಭೆ ಚುನಾವಣೆಯಲ್ಲಿ 39 ಲೋಕಸಭಾ ಕ್ಷೇತ್ರಗಳ ಪೈಕಿ ಡಿಎಂಕೆಯ ಈ ಮೈತ್ರಿಕೂಟವು 38 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.