ಬೆಂಗಳೂರು: ಕೇರಳ ಸಿನಿಮಾ ಕ್ಷೇತ್ರದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿರುವ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೇ, ಹಲವು ಸ್ಟಾರ್ ನಟರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ.
ನಟರಾದ ಮುಕೇಶ್, ಮಣಿಯಂಪಿಳ್ಳ ರಾಜು, ಇಡವೆಳ ಬಾಬು ಹಾಗೂ ಜಯಸೂರ್ಯ ತಮಗೆ ದೈಹಿಕವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನಟಿ ಮಿನು ಮುನೀರ್ ಹೇಳಿದ್ದಾರೆ.
ಫೇಸ್‌ಬುಕ್‌ನಲ್ಲಿ ಅವರ ಚಿತ್ರಗಳನ್ನು ಹಂಚಿಕೊಂಡು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ನಟರ ಹೆಸರಿನ ಜೊತೆಗೆ ನಿರ್ಮಾಣ ಸಿಬ್ಬಂಸಿ ಹೆಸರುಗಳನ್ನೂ ಉಲ್ಲೇಖಿಸಿದ್ದಾರೆ.
‘ಮಲಯಾಳ ಸಿನಿಮಾ ಕ್ಷೇತ್ರದಲ್ಲಿ ನಾನು, ಮುಕೇಶ್, ಮಣಿಯಂಪಿಳ್ಳ ರಾಜು, ಇಡವೆಳ ಬಾಬು, ಜಯಸೂರ್ಯ, ವಕೀಲ ಚಂದ್ರಶೇಖರನ್, ನಿರ್ಮಾಣ ಸಿಬ್ಬಂದಿ ನೊಬೆಲ್ ಹಾಗೂ ವಿಚು ಅವರಿಂದ ಅನುಭವಿಸಿದ ಸರಣಿ ದೈಹಿಕ ಹಲ್ಲೆ ಮತ್ತು ಅವಾಚ್ಯ ಶಬ್ದಗಳ ನಿಂದನೆಯ ಬಗ್ಗೆ ಬರೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.
‘2013ರಲ್ಲಿ ನಾನು ಈ ವ್ಯಕ್ತಿಗಳಿಂದ ದೈಹಿಕ ಹಲ್ಲೆ ಮತ್ತು ಅವಾಚ್ಯ ಶಬ್ದಗಳ ನಿಂದನೆಯನ್ನು ಎದುರಿಸಿದ್ದೇನೆ. ನಾನು ಅವರಿಗೆ ಸಹಕಾರ ನೀಡಿ, ಕೆಲಸ ಮುಂದುವರಿಸಿದೆ. ಇದರಿಂದಾಗಿ ನಾನು ಮಲಯಾಳಂ ಸಿನಿಮಾ ತೊರೆದು, ಚೆನ್ನೈಗೆ ಸ್ಥಳಾಂತರಗೊಳ್ಳಬೇಕಾಯಿತು’ ಎಂದು ಬರೆದುಕೊಂಡಿದ್ದಾರೆ.
ಕೆಲವರು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಮಲಯಾಳ ಚಿತ್ರರಂಗದಲ್ಲಿ ಕೇಳಿ ಬಂದ ಎಲ್ಲಾ ಆರೋಪಗಳ ಬಗ್ಗೆ ತನಿಖೆಯಾಗಲಿ.– ಮಣಿಯಂಪಿಳ್ಳ ರಾಜು, ನಟ
‘ನಾನು ಈ ಬಗ್ಗೆ ಪತ್ರಿಕೆಯೊಂದರಲ್ಲಿ ಮಾತನಾಡಿದ್ದೆ. ನಾನು ಅನುಭವಿಸಿದ ಆಘಾತ ಮತ್ತು ಸಂಕಟಕ್ಕೆ ನ್ಯಾಯ ಕೇಳುತ್ತಿದ್ದೇನೆ. ಅವರ ಹೇಯ ನಡವಳಿಕೆಗೆ ಕ್ರಮ ತೆಗೆದುಕೊಳ್ಳಲು ನಾನು ನಿಮ್ಮ ಬೆಂಬಲ ಯಾಚಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಮಲಯಾಳ ಸಿನಿಮಾ ಕಲಾವಿದರ ಸಂಘದ (ಅಮ್ಮ) ಸದಸ್ವತ್ವ ಪಡೆಯಲು ಬಯಸಿದ ವೇಳೆ ಆದ ಘಟನೆಯನ್ನೂ ಅವರು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.
‘ಅಮ್ಮದ ಸದಸ್ಯತ್ವ ಬಯಸಿದಾಗ ನಾನು 6 ಚಿತ್ರಗಳಲ್ಲಿ ನಟಿಸಿದ್ದೆ. ಆದರೆ ಅಮ್ಮದ ಸದಸ್ಯತ್ವ ಸಿಗಬೇಕಾದರೆ ಲೈಂಗಿಕವಾಗಿ ಸಹರಿಸಬೇಕು ಎಂದು ಮುಕೇಶ್ ಒತ್ತಡ ಹಾಕಿದ್ದರು’ ಎಂದು ಮಿನು ಹೇಳಿದ್ದಾಗಿ ಮಲಯಾಳ ಮನೋರಮ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.