ADVERTISEMENT

₹ 200 ಕೋಟಿ ವಂಚನೆ ಪ್ರಕರಣ: ಮತ್ತೆ ನಟಿ ನೋರಾ ಫತೇಹಿ ವಿಚಾರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2022, 7:24 IST
Last Updated 3 ಸೆಪ್ಟೆಂಬರ್ 2022, 7:24 IST
 ನೋರಾ ಫತೇಹಿ
 ನೋರಾ ಫತೇಹಿ   

ದೆಹಲಿ: ಸುಕೇಶ್‌ ಚಂದ್ರಶೇಖರ್‌ ಮುಖ್ಯ ಆರೋಪಿಯಾಗಿರುವ ₹ 200 ಕೋಟಿ ಹಣಅಕ್ರಮ ವರ್ಗಾವಣೆ ಹಾಗೂ ವಂಚನೆ ಪ್ರಕರಣದಲ್ಲಿ ಬಾಲಿವುಡ್‌ ನಟಿನೋರಾ ಫತೇಹಿ ಅವರನ್ನು ದೆಹಲಿ ಪೊಲೀಸರು ಶುಕ್ರವಾರ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಈಗಾಗಲೇ ಬಾಲಿವುಡ್‌ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಅವರು ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಇದೇ ಪ್ರಕರಣದ ಭಾಗವಾಗಿ ದೆಹಲಿ ಪೊಲೀಸರು ನೋರಾ ಫತೇಹಿ ಅವರನ್ನು ವಿಚಾರಣೆ ಮಾಡಿದ್ದಾರೆ.

ನೋರಾ ಫತೇಹಿ ಅವರಿಗೆ ಬೆಲೆ ಬಾಳುವ ವಾಚ್‌, ಬ್ಯಾಗ್‌ , ಬಿಎಂಡಬ್ಲ್ಯೂ ಕಾರು ಹಾಗೂ ಸ್ವಲ್ಪ ನಗದು ಹಣವನ್ನು ಉಡುಗೊರೆಯಾಗಿ ನೀಡಿರುವುದಾಗಿ ಸುಕೇಶ್‌ ಚಂದ್ರಶೇಖರ್‌ ವಿಚಾರಣೆ ವೇಳೆ ಅಧಿಕಾರಿಗಳಿಗೆ ಹೇಳಿದ್ದರು. ಇದರ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಮತ್ತೆ ವಿಚಾರಣೆ ನಡೆಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ನಾನು ಸುಕೇಶ್‌ ಕಡೆಯಿಂದ ಯಾವುದೇ ಉಡುಗೊರೆ ಪಡೆದಿಲ್ಲ ಎಂದು ಪೊಲೀಸರಿಗೆ ಹೇಳಿದ್ದರು. ಆದರೆ ನಂತರದ ದಿನಗಳಲ್ಲಿ ನೋರಾ ಫತೇಹಿ ಬೆಲೆ ಬಾಳುವ ಬ್ಯಾಗ್‌ ಹಾಗೂ ವಾಚ್‌ ಪಡೆದಿದ್ದಾಗಿ ಹೇಳಿದ್ದರು. ನಂತರಬಿಎಂಡಬ್ಲ್ಯೂ ಕಾರು ನನಗೆ ಅವಶ್ಯ ಇಲ್ಲದಿರುವುದರಿಂದ ಸುಕೇಶ್‌ಗೆ ವಾಪಸ್‌ ನೀಡಿರುವುದಾಗಿಯೂ ಹೇಳಿದ್ದರು.

ಅವರ ಗೊಂದಲಮಯ ಹೇಳಿಕೆಗಳ ಹಿನ್ನೆಲೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಜೀವಬೆದರಿಕೆ ಹಿನ್ನೆಲೆಯಲ್ಲಿ ತಿಹಾರ್‌ ಜೈಲ್‌ನಿಂದ ವಂಚಕ ಸುಕೇಶ್ ಚಂದ್ರಶೇಖರ್‌ ಮತ್ತು ಆತನ ಪತ್ನಿಯನ್ನು ದೆಹಲಿಯ ಮಂಡೋಲಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.